ಹೊಸದಿಲ್ಲಿ, ಮೇ 24 : ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಎದುರಾಗಿರುವ ಅರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡಿ, ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್ ನ್ನು ಘೋಷಿಸಿದ್ದರು ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶೇಷ ಪ್ಯಾಕೇಜ್ ನ ವಿಸ್ತ್ರತ ಮಾಹಿತಿಯನ್ನು ದೇಶದ ಜನರ ಮುಂದಿಟ್ಟಿದ್ದರು.
ವಿಶೇಷ ಆರ್ಥಿಕ ಪ್ಯಾಕೇಜ್ ನ್ನು ಘೋಷಿಸುವ ಮೊದಲು ಕೇಂದ್ರ ಸರ್ಕಾರ, ಇತರ ರಾಷ್ಟ್ರಗಳ ಪ್ಯಾಕೇಜ್ ನಲ್ಲಿ ಏನಿದೆ ಎಂಬುದನ್ನು ಅಧ್ಯಯನ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.ಶನಿವಾರ ಫೇಸ್ ಬುಕ್ ನಲ್ಲಿ ಬಿಜೆಪಿ ಮುಖಂಡ ನಳಿನ್ ಕೊಹ್ಲಿ ಅವರೊಂದಿಗಿನ ಸಂವಾದದ ವೇಳೆಯಲ್ಲಿ ಅರ್ಥಿಕತೆಗೆ ಚೈತನ್ಯ ತುಂಬಲು ದೇಶದಲ್ಲಿ ಪ್ಯಾಕೇಜ್ ಘೋಷಿಸುವ ಮುನ್ನ ಇತರ ರಾಷ್ಟ್ರಗಳ ಪ್ರೋತ್ಸಾಹಕ ಪ್ಯಾಕೇಜ್‌ಗಳಲ್ಲಿ ಏನಿದೆ ಎಂಬುದನ್ನು ಅಧ್ಯಯನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಯೊಂದು ದೇಶವೂ ಕೂಡ ವಿತ್ತಿಯ, ಹಣಕಾಸಿನ, ಖಾತರಿ, ಕೇಂದ್ರದ ದ್ರವ್ಯತೆ ಮತ್ತಿತರ ಕ್ರಮಗಳನ್ನು ಮುಂದಿಟ್ಟುಕೊಂಡು ಪ್ಯಾಕೇಜ್ ಸಿದ್ಧಪಡಿಸಿವೆ ಎಂದ ನಿರ್ಮಲಾ ಸೀತಾರಾಮನ್, ಇತರ ದೇಶಗಳಿಗಿಂತ ಭಾರತ ಭಿನ್ನವಾಗಿಲ್ಲ. ಆದರೆ ಅನುಪಾತದಲ್ಲಿ ವ್ಯತ್ಯಾಸವಿರಬಹುದು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೆಲವು ಸಂಸ್ಥೆಗಳನ್ನು ಹೊಂದಿರುವಾಗ ಅವರಿಗೆ ಒಂದು ಮಾರ್ಗವಲ್ಲದಿದ್ದರೆ ಇನ್ನೊಂದು ಮಾರ್ಗದಲ್ಲಿ ಕಡಿಮೆ ರೀತಿಯಲ್ಲಿ ಹೋಗಬಹುದಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಮರ್ಥಿಸಿದ ನಿರ್ಮಲಾ ಸೀತಾರಾಮನ್ ಜನ್ ಧನ್ ಖಾತೆಗಳ ಮೂಲಕ ಜನರ ಕೈಗೆ ನೇರವಾಗಿ ಹಣವನ್ನು ನೀಡುವ ಪ್ರಯತ್ನವು ಸೇರಿದೆ ಇದರಿಂದ ದೇಶದ ಆರ್ಥಿಕತೆಗೆ ಹೆಚ್ಚಿನ ದ್ರವ್ಯತೆ ಹರಿದುಬರಲಿದೆ ಎಂದು ಹೇಳಿದರು.
ಈ ಮೊದಲು ಕೊರೋನಾ ವೈರಸ್ ನಿಂದ ಉಂಟಾಗಿರುವ ಬಿಕ್ಕಟ್ಟನ್ನು ನಿಭಾಯಿಸುವ ನಿಟ್ಟಿನಲ್ಲಿ ವಿಶೇಷ ಆರ್ಥಿಕ ಪ್ಯಾಕೇಜ್ ಬಹಳ ಪರಿಣಾಮ ಬೀರಲಿದೆ. ನಿಗದಿತ ವೆಚ್ಚ ಮತ್ತು ಕೆಲಸದ ಬಂಡವಾಳವನ್ನು ಬ್ಯಾಂಕ್ ಗಳ ಮೂಲಕ ನಿರ್ವಹಿಸಬೇಕು ಎಂದು ಹೇಳಿಕೆ ನೀಡಿದ್ದರು. ಕೊರೋನಾ ಸೋಂಕಿನ ಬಿಕ್ಕಟ್ಟನ್ನು ಸಮರ್ಥವಾಗಿ ಬಗೆಹರಿಸಲು, ಅರ್ಥಿಕತೆಗೆ ಶಕ್ತಿ ತುಂಬಲು ಮತ್ತು ಸಂಕಷ್ಟ ಎದುರಿಸುತ್ತಿರುವ ಜನರಿಗೆ ನೆರವಾಗಲು ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ಅರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ವಿಶ್ವದ ಅತಿದೊಡ್ಡ ಅರ್ಥಿಕ ಪ್ಯಾಕೇಜ್ ಎಂಬ ಖ್ಯಾತಿಗೆ ಪಾತ್ರವಾದ ಈ ಪ್ಯಾಕೇಜ್ ಅನ್ನು ಐದು ದಿನಗಳ ಕಾಲ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐದು ಹಂತಗಳಲ್ಲಿ ಮಾಹಿತಿ ನೀಡಿದ್ದರು.








