ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆ – ದೊಡ್ಡದೊಡ್ಡ ಕಡಾಯಿಗಳಲ್ಲಿ ಜಿಲೇಬಿ ಸಿದ್ಧತೆ..
ಪಂಜಾಬ್ ರಾಜ್ಯದ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚುನಾವಣಾ ಫಲಿತಾಂಶದ ದಿನವಾದ ಗುರುವಾರ (ಮಾರ್ಚ್ 10) ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಫಲಿತಾಂಶದ ನಂತರದ ಸಂಭ್ರಮಕ್ಕಾಗಿ ಸಡಗರದ ಸಿದ್ಧತೆಗಳು ನಡೆಯುತ್ತಿವೆ. ಪಂಜಾಬ್ನಲ್ಲಿ ಈ ಬಾರಿ ಆಪ್ ವಿಜಯಿಯಾಗಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿರುವುದರಿಂದ ಸಂಗ್ರೂರ್ನಲ್ಲಿರುವ ಭಗವಂತ್ ಮಾನ್ರ ಸ್ವಗೃಹದಲ್ಲಿ ದೊಡ್ಡದೊಡ್ಡ ಕಡಾಯಿಗಳಲ್ಲಿ ಜಿಲೇಬಿ ಸಿದ್ಧಪಡಿಸಲಾಗುತ್ತಿದೆ.
ಸಂಗ್ರೂರ್ನ ಗುರುಸಾಗರ್ ಮಸ್ತೌನಾ ಸಾಹಿಬ್ ಗುರುದ್ವಾರದಲ್ಲಿ ಭಗವಂತ್ ಮಾನ್ ಪ್ರಾರ್ಥನೆ ಸಲ್ಲಿಸಿದರು. ಒಂದು ವೇಳೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರೂ ನಂತರದ ದಿನಗಳಲ್ಲಿಯೂ ಈಗಿರುವಂತೆಯೇ ಸಹಜ ಬದುಕನ್ನು ನಿರ್ವಹಿಸಲಿದ್ದೇನೆ ಎಂದಿದ್ದರು. ಜನಪ್ರಿಯತೆ ಎನ್ನುವುದು ನನ್ನ ಬದುಕಿನ ಭಾಗವೇ ಆಗಿದೆ. ನನ್ನ ವ್ಯಕ್ತಿತ್ವದ ಮೇಲೆ ಹೊಸ ಜವಾಬ್ದಾರಿಯಿಂದ ಹೆಚ್ಚೇನು ಪರಿಣಾಮ ಆಗುವುದಿಲ್ಲ ಎಂದು ಹೇಳಿದ್ದರು.
ಸಂಸತ್ತಿಗೂ ಮದ್ಯ ಸೇವಿಸಿ ಬರುವ ಮದ್ಯವ್ಯಸನಿ ಭಗವಂತ ಮಾನ್ ಎಂದು ಪ್ರತಿಪಕ್ಷಗಳು ಚುನಾವಣಾ ಪ್ರಚಾರದ ವೇಳೆ ಆರೋಪ ಮಾಡಿದ್ದವು. ಜನರ ನಡುವೆ ಇದ್ದು ಕೆಲಸ ಮಾಡಬಲ್ಲ ಅವರ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದವು. ಆದರೆ ಮತದಾರರು ಅವರತ್ತಲೇ ಒಲವು ತೋರಿದ್ದಾರೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.
ಎಕ್ಸಿಟ್ ಪೋಲ್ಗಳು ಆಪ್ ಪಕ್ಷವೇ ಪಂಜಾಬ್ನಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು. 11 ಎಕ್ಸಿಟ್ ಪೋಲ್ಗಳ ಸರಾಸರಿ ಲೆಕ್ಕಹಾಕಿದಾದ ಆಪ್ಗೆ 63 ಸ್ಥಾನ ಸಿಗುವ ನಿರೀಕ್ಷೆ ವ್ಯಕ್ತವಾಗಿತ್ತು. ಒಟ್ಟು 117 ಸ್ಥಾನಗಳಿರುವ ಪಂಜಾಬ್ ವಿಧಾನಸಭೆಯಲ್ಲಿ ಅಧಿಕಾರ ರಚನೆಗೆ 59 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ.
Aam Aadmi Party Leads in Punjab Jilabi preparation in large cauldron ..