ಹೊಸದಿಲ್ಲಿ, ಮೇ 24 : ಸಾಮಾಜಿಕ ಸಂಪರ್ಕದ ಜಾಲತಾಣ ಫೇಸ್ ಬುಕ್ ಹಾಗೂ ಗೂಗಲ್ ಕಂಪನಿಯು ಈ ವರ್ಷಾಂತ್ಯದ ವರೆಗೂ ವರ್ಕ್ ಫ್ರಮ್ ಹೋಮ್ ಮಾಡಲು ತನ್ನ ಉದ್ಯೋಗಿಗಳಿಗೆ ಅವಕಾಶ ನೀಡಿದೆ ಎಂದು ವರದಿಗಳು ಹೇಳಿವೆ. ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಎಪ್ರಿಲ್ ನಲ್ಲಿಯೇ ತನ್ನ ಬಹುತೇಕ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಹೇಳಿದ್ದರು. ಆದರೆ ಇದೀಗ ಕೊರೋನಾದ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಲಾಕ್ ಡೌನ್ ಅವಧಿ ಮುಗಿದಿದ್ದರೂ, ತನ್ನ ಕಂಪೆನಿಯ 50 ಪರ್ಸೆಂಟ್ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶ ನೀಡಲು ಫೇಸ್‌ಬುಕ್ ಚಿಂತನೆ ಮಾಡುತ್ತಿದೆ.
ಮನೆಯಿಂದಲೇ ಕೆಲಸ ಮಾಡುವುದನ್ನು ಉತ್ತೇಜಿಸಲು ಫೇಸ್ ಬುಕ್ ಬಯಸಿದೆ ಎಂದ ಜುಕರ್‌ಬರ್ಗ್ ಮುಂದಿನ 10 ವರ್ಷಗಳಲ್ಲಿ ಕಂಪೆನಿಯ ಶೇಕಡಾ 50 ರಷ್ಟು ಉದ್ಯೋಗಿಗಳು ರಿಮೋಟ್ ವರ್ಕಿಂಗ್ ಮಾಡುತ್ತಾರೆ ಎಂದು ಹೇಳಿದರು. ಉದ್ಯೋಗಿಗಳು ಕಛೇರಿಗೆ ಬರುವ ಅಗತ್ಯವಿಲ್ಲದಿರುವುದರಿಂದ ಅವರು ಸೋಂಕು ಪೀಡಿತರಾಗುವುದು ಇದರಿಂದ ತಪ್ಪುತ್ತದೆ. ಮನೆಯಿಂದ ಕೆಲಸ ಮಾಡುವ ಕಾರಣ ಉದ್ಯೋಗಿಗಳ ವೇತನವು ಪರಿಣಾಮ ಬೀರಲಿದ್ದು, ಅದು ಮಾರುಕಟ್ಟೆ ದರವನ್ನು ಅವಲಂಬಿಸಿರುತ್ತದೆ. ಅಲ್ಲದೇ ಸ್ಥಳಕ್ಕೆ ಅನುಗುಣವಾಗಿ ಅದರಲ್ಲಿ ಬದಲಾವಣೆಯಿರುತ್ತದೆ ಎಂದು ಅವರು ಹೇಳಿದರು.
ಮನೆಯಿಂದ ಕೆಲಸ ಮಾಡುವ ನೀತಿಯು ಉದ್ಯೋಗಿಗಳ ಜೊತೆ ಕಂಪೆನಿಗೂ ಅನುಕೂಲವಾಗಲಿದೆ. ಇದು ಕಂಪನಿಯ ವೆಚ್ಚವನ್ನು ಕಡಿಮೆಗೊಳಿಸುವ ಜೊತೆಗೆ ವಿದ್ಯುತ್ ಮತ್ತು ಇಂಟರ್ನೆಟ್ ಬಳಕೆಯನ್ನು ಕಡಿಮೆ ಮಾಡುತ್ತದೆ ಎಂದು ಜುಕರ್‌ಬರ್ಗ್ ತಿಳಿಸಿದರು. ಶೇಕಡಾ 60 ರಷ್ಟು ಫೇಸ್‌ಬುಕ್ ಉದ್ಯೋಗಿಗಳು ತಮಗೆ ಹೊಂದಿಕೊಳ್ಳುವ ವಾತಾವರಣದಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಮನೆಯಿಂದಲೇ ಕೆಲಸ ಮಾಡುವ ಅವಕಾಶ ದೊರೆತಾಗ ಶೇಕಡಾ 50 ರಷ್ಟು ಉದ್ಯೋಗಿಗಳು ಇತರ ಅಗ್ಗದ ನಗರಗಳಿಗೆ ಹೋಗಲು ಬಯಸುತ್ತಾರೆ ಎಂದ ಜುಕರ್‌ಬರ್ಗ್ ಲಾಕ್ ಡೌನ್ ನಂತರ ಕೇವಲ 25 ಪರ್ಸೆಂಟ್ ಉದ್ಯೋಗಿಗಳು ಕಚೇರಿಯಲ್ಲಿ ಕೆಲಸ ಮಾಡಲು ಬಯಸುತ್ತಾರೆ ಎಂದು ಅವರು ಹೇಳಿದರು.
ಮನೆಯಿಂದ ಕೆಲಸ ಮಾಡಲು ಬಯಸುವ ನೌಕರರು ತಮ್ಮ ಸಂಪೂರ್ಣ ವಿವರಗಳನ್ನು ಮತ್ತು ಅವರ ಸ್ಥಳವನ್ನು ಜನವರಿ 1, 2021 ರೊಳಗೆ ನೀಡಬೇಕಾಗಿದ್ದು, ಈ ನಿರ್ಧಾರವು ಕಂಪನಿಯ ಹಣಕಾಸು ಮತ್ತು ನೌಕರರ ಪ್ಯಾಕೇಜ್‌ಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ ಎಂದು ಜುಕರ್‌ಬರ್ಗ್ ಹೇಳಿದರು.








