ದೆಹಲಿ, ಮೇ 24 : ಟೊಮೆಟೋ, ಈರುಳ್ಳಿ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಏಷ್ಯಾದಲ್ಲೇ ಅತಿ ದೊಡ್ಡ ಸಗಟು ಮಾರುಕಟ್ಟೆಯಾದ ದೆಹಲಿಯ ಆಜಾದ್ ಪುರ್ ಮಂಡಿಯಲ್ಲಿ ಟೊಮೆಟೋ ಕೆ.ಜಿ ಗೆ 1 ರೂಪಾಯಿಗಿಂತಲೂ ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ.
ಮಾರುಕಟ್ಟೆಯಲ್ಲಿ ತರಕಾರಿಗಳ ಚಿಲ್ಲರೆ ಮಾರಾಟಗಾರರ ಸಂಖ್ಯೆ ಕಡಿಮೆಯಾಗಿದ್ದು, ಇದರಿಂದ ಬೇಡಿಕೆ ಕೂಡ ಕುಸಿದಿದೆ ಎಂದು ಹೇಳಲಾಗುತ್ತಿದೆ. ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಈರುಳ್ಳಿ ಕೆ.ಜಿ.ಗೆ 50 ಪೈಸೆಯಿಂದ 1 ರೂಪಾಯಿ ಆಗಿದ್ದರೆ, ಉದ್ದಬದನೆ ಕೇಜಿಗೆ ಎರಡು ರೂಪಾಯಿಯಿಂದ ಮೂರಕ್ಕೆ ಏರಿಕೆ ಆಗಿದೆ. ಹೀರೇಕಾಯಿ ಕೆ ಜಿ ಗೆ 6 ರೂಪಾಯಿಯಂತೆ ಮಾರಾಟವಾಗುತ್ತಿದೆ.
ವಲಸೆ ಕಾರ್ಮಿಕರು ಊರಿಗೆ ಮರಳಿರುವುದು ಮತ್ತು ರೆಸ್ಟೋರೆಂಟ್ ಡಾಬಾಗಳು ಮುಚ್ಚಿರುವುದರಿಂದ ತರಕಾರಿಗಳ ಬೇಡಿಕೆ ಕಡಿಮೆಯಾಗಿದ್ದು, ಬೆಲೆ ಕುಸಿದಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೇ ಮಾರ್ಕೆಟ್ ನಲ್ಲಿ ಗ್ರಾಹಕರು ಉದ್ದದ ಸರತಿಯಲ್ಲಿ ನಿಂತು ತರಕಾರಿ ಖರೀದಿ ಮಾಡಬೇಕಿದ್ದು, ಅದಕ್ಕಾಗಿ ಖರೀದಿಯಿಂದ ದೂರ ಉಳಿಯುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ತರಕಾರಿಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.








