ಪಂಚರಾಜ್ಯಗಳಲ್ಲಿ ಸರಕಾರ ರಚಿಸಲು ನಡಿತಿದೆ ಕಸರತ್ತು – Saaksha Tv
ನವದೆಹಲಿ: ಪಂಚರಾಜ್ಯ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಗೆದ್ದ ಪಕ್ಷಗಳು ಸರಕಾರ ರಚಿಸುವ ಕಾರ್ಯಕ್ಕೆ ತಯಾರಿ ನಡೆಸಿವೆ.
ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಜಯಸಾಧಿಸಿದ್ದು, ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯ ಸಾಧಿಸಿದೆ.
ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದು, ಈ ಮೂಲಕ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ. ಈ ಹಿನ್ನಲೆಯಲ್ಲಿ ಶುಕ್ರವಾರ ಯೋಗಿ ಆದಿತ್ಯನಾಥ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರಿಗೆ ರಾಜೀನಾಮೆ ನೀಡಿ ಹೊಸ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟಿದ್ದಾರೆ. ಹೊಸ ಸರ್ಕಾರ ರಚನೆಯಾಗುವವರೆಗೂ ಸಿಎಂ ಹುದ್ದೆಯಲ್ಲಿ ಮುಂದುವರಿಯುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.
ಇನ್ನೂ ಉತ್ತರಾಖಂಡನಲ್ಲಿ 70 ವಿಧಾನಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಗಳಿಸಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನಿನ್ನೆ ಮಧ್ಯಾಹ್ನ ರಾಜಭವನದಲ್ಲಿ ರಾಜ್ಯಪಾಲ ಗುರ್ಮೀತ್ ಸಿಂಗ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲರು ಅವರಿಗೆ ಸೂಚಿಸಿದ್ದಾರೆ. ಖತೀಮಾ ಕ್ಷೇತ್ರದಿಂದ ಉತ್ತರಾಖಂಡದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಕೇಂದ್ರ ಸಚಿವರು ಮತ್ತು ಹಿರಿಯ ಬಿಜೆಪಿ ನಾಯಕರಾದ ಪಿಯೂಷ್ ಗೋಯಲ್ ಮತ್ತು ಧರ್ಮೇಂದ್ರ ಪ್ರಧಾನ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.
ಗೋವಾ ಸಂಪುಟ ಶುಕ್ರವಾರ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಣಯವನ್ನು ಅಂಗೀಕರಿಸಿದ್ದು. ಸೋಮವಾರ ಈ ನಿರ್ಣಯವನ್ನು ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಸಾವಂತ್ ಅವರು, ನಿನ್ನೆ ತಮ್ಮ ಸರ್ಕಾರದ ಕೊನೆಯ ಕ್ಯಾಬಿನೆಟ್ ಸಭೆ ನಡೆಸಿದ್ದು ಪ್ರಸ್ತುತ ವಿಧಾನಸಭೆಯ ಅಧಿಕಾರಾವಧಿಯು ಮಾರ್ಚ್ 15 ರಂದು ಮುಕ್ತಾಯಗೊಳ್ಳುತ್ತದೆ. ಅಲ್ಲದೇ ಸರ್ಕಾರ ರಚನೆ ಕುರಿತು ಚರ್ಚೆ ನಡೆಸಲು ಕೇಂದ್ರ ವೀಕ್ಷಕರು ಗೋವಾಕ್ಕೆ ಬರಲಿದ್ದಾರೆ. ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಕೇಂದ್ರ ವೀಕ್ಷಕರು ನಿರ್ಧರಿಸುತ್ತಾರೆ ಎಂದು ಸಾವಂತ್ ಹೇಳಿದ್ದಾರೆ.
ಮಣಿಪುರದಲ್ಲಿ ಇಂದು ಬೆಳಗ್ಗೆ ಇಂಫಾಲದಲ್ಲಿರುವ ಪಕ್ಷದ ಕಚೇರಿಯಲ್ಲಿ ಚರ್ಚೆ ನಡೆಸಿದ ಬಿಜೆಪಿ, 60 ಸದಸ್ಯ ಬಲದ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಾರ್ಟಿ 32 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದುಕೊಂಡಿದೆ.
ಪಂಜಾಬ್‌ನಲ್ಲಿ ಎಎಪಿ ಭಾರಿ ಬಹುಮತ ಪಡೆದ ನಂತರ ಹೊಸ ಸರ್ಕಾರ ರಚಿಸಲು ಸಜ್ಜಾಗಿದೆ.