ನಮ್ಮ ನಿರೀಕ್ಷೆ ವಿರುದ್ಧ ತೀರ್ಪು ಬಂದಿದೆ : ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಉಡುಪಿ ವಿದ್ಯಾರ್ಥಿನಿಯರ ಸುದ್ದಿಗೋಷ್ಠಿ
ಉಡುಪಿ: ಹಿಜಾಬ್ ಹೈಕೋರ್ಟ್ ತೀರ್ಪು ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ಮರು ಪ್ರಶ್ನೆ ಮಾಡುತ್ತೇವೆ ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಉಡುಪಿಯ ಐವರು ವಿದ್ಯಾರ್ಥಿನಿಯರು ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಮಗೆ ನ್ಯಾಯಾಲಯದ ಮೇಲೆ ಬಹಳ ನಿರೀಕ್ಷೆ ಇತ್ತು. ವ್ಯವಸ್ಥೆ ಮೇಲೆ ಬಹಳ ಭರವಸೆ ಇತ್ತು. ಧರ್ಮದಲ್ಲಿ ನಮಗೆ ಹಿಜಾಬ್ ಅವಕಾಶವಿದೆ. ಕುರಾನ್ನಲ್ಲಿ ಎಲ್ಲಾ ಮುಸ್ಲಿಂ ಮಹಿಳೆಯರಿಗೆ ತಲೆ ಮತ್ತು ಎದೆಯನ್ನು ಮುಚ್ಚಿಕೊಳ್ಳುವ ಅವಕಾಶ ಇದೆ. ಆದರೆ ಹೈಕೋರ್ಟ್ನಲ್ಲಿ ತೀರ್ಪು ನಮ್ಮ ವಿರುದ್ಧ ಬಂದಿದೆ ಎಂದು ಹೇಳಿದರು.
ಅಲ್ಲದೆ ನಮಗೆ ನ್ಯಾಯ ಸಿಗುವ ಭರವಸೆ ಇತ್ತು. ನಾವು ಹಿಜಾಬ್ ತೆಗೆದು ತರಗತಿ ಒಳಗೆ ಹೋಗಲ್ಲ. ನಾವು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಕರುನ್ ನಲ್ಲಿ ಹಿಜಾಬ್ ಅವಶ್ಯಕತೆ ಇಲ್ಲದಿದ್ದರೆ, ನಾವು ಅದನ್ನು ಧರಿಸುತ್ತಿರಲಿಲ್ಲ. ಹಿಜಾಬ್ ಮುಖ್ಯ ಅಲ್ಲವಾದರೆ, ನಾವು ಹೋರಾಟವನ್ನು ಮಾಡುತ್ತಿರಲಿಲ್ಲ. ನಮಗೆ ಶಿಕ್ಷಣ ಜೊತೆ ಹಿಜಾಬ್ ಕೂಡಾ ಬೇಕು ಎಂದಿದ್ದಾರೆ.
ಹಾಗೇ ರಾಜಕೀಯ ಲಾಭಕ್ಕೆ ಹಿಜಾಬ್ ವಿಚಾರವನ್ನು ಕಮ್ಯೂನಲ್ ಮಾಡಲಾಗಿದೆ ಹಿಜಾಬ್ ಅನ್ನು ರಾಜಕೀಯ ದುರುದ್ದೇಶದಿಂದ ದೊಡ್ಡ ವಿವಾದ ಮಾಡಿದರು. ಎಲ್ಲರ ಶಿಕ್ಷಣಕ್ಕೆ ಬಹಳ ಸಮಸ್ಯೆಯಾಗಿದೆ. ಹಿಜಾಬ್ಗೆ ತಡೆ ನೀಡಿರುವುದು ನಮ್ಮ ಶಿಕ್ಷಣಕ್ಕೆ ತಡೆ ನೀಡಿದಂತೆ ಆಗಿದೆ. ನಮಗೆ ಧರ್ಮ ಮತ್ತು ಶಿಕ್ಷಣ ಎರಡೂ ಬಹಳ ಮುಖ್ಯ ಎಂದು ಅಳಲು ತೋಡಿಕೊಂಡರು.
ಹಿಜಾಬ್ ಹಕ್ಕಿಗಾಗಿ ಮುಂದಿನ ಹೋರಾಟ ಮಾಡುತ್ತೇವೆ. ನಮ್ಮ ಸಂವಿಧಾನಾತ್ಮಕ ಹಕ್ಕಿಗಾಗಿ ಹೋರಾಡುತ್ತೇವೆ. ನಾವು ನಮ್ಮ ಕುರಾನ್ ಅನುಸರಿಸುತ್ತೇವೆ. ನಾವು ಸರ್ಕಾರದ ಆದೇಶ ಅನುಸರಿಸಬೇಕಾಗಿಲ್ಲ. ಹಿಜಾಬ್ ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ಬೇಕು. ಪರೀಕ್ಷೆಗಾಗಿ ನಾವು ಎರಡು ತಿಂಗಳಿಂದ ಮನೆಯಿಂದಲೇ ತಯಾರಿ ನಡೆಸುತ್ತಿದ್ದೇವೆ ಎಂದು ಹೇಳಿದರು.
ನಾವು ಕಾಂಪ್ರಮೈಸ್ ಆಗಲ್ಲ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ನಾವು ಹೈಕೋರ್ಟ್ಗೆ ಹಿಜಾಬ್ಗಾಗಿ ಹೋದೆವು. ನಮ್ಮ ನಿರೀಕ್ಷೆ ವಿರುದ್ಧ ತೀರ್ಪು ಬಂದಿದೆ. ಸರ್ಕಾರದ ವಸ್ತ್ರಸಂಹಿತೆ ಆದೇಶವನ್ನು ತೀರ್ಪಲ್ಲೇ ಪ್ರಕಟಿಸಲಾಗಿದೆ. ನಾವು ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗಲ್ಲ. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆವು ಎಂದರು.









