ಎಲೆಕ್ಟ್ರಾನಿಕ್ ವಾಹನ ಉತ್ಪಾದನೆಯಲ್ಲಿ ಭಾರತಕ್ಕೆ ಅಗ್ರಸ್ಥಾನ – ನಿತಿನ್ ಗಡ್ಕರಿ..
ಮಾಲಿನ್ಯ ನಿಯಂತ್ರಣ ಹಾಗೂ ಇಂಧನ ಮಿತವ್ಯಯಕ್ಕಾಗಿ ಎಲೆಕ್ಟ್ರಾನಿಕ್ ವಾಹನ ಬಳಕೆಗೆ ಸರ್ಕಾರ ಆದ್ಯತೆ ನೀಡಿದ್ದು, ಈ ವಾಹನಗಳ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ವಿವರ ನೀಡಿದ ಸಚಿವರು, ದೇಶದಲ್ಲಿ ಜಾಗತಿಕ ಮಟ್ಟದ ಎಲ್ಲ ಎಲೆಕ್ಟ್ರಾನಿಕ್ ವಾಹನ ಉತ್ಪಾದನಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 7.5 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದೆ. ಇನ್ನು ಐದು ವರ್ಷದೊಳಗೆ ಈ ಪ್ರಮಾಣ 15 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದು ತಿಳಿಸಿದರು.
ದೇಶದಲ್ಲಿ ಎಲೆಕ್ಟ್ರಾನಿಕ್ ವಾಹನ ಬಳಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, 2020ಕ್ಕೆ ಹೋಲಿಸಿದರೆ, 2021ರಲ್ಲಿ ವಿದ್ಯುನ್ಮಾನ ತ್ರಿಚಕ್ರ ವಾಹನ ಬಳಕೆ ಶೇಕಡ 74.78ರಷ್ಟು ಏರಿಕೆಯಾಗಿದ್ದು, ನಾಲ್ಕು ಚಕ್ರದ ವಾಹನ ಬಳಕೆ ಶೇಕಡ 1 ಸಾವಿರದ 237ರಷ್ಟು ಭಾರೀ ಏರಿಕೆ ಕಂಡಿದೆ.
ವಿದ್ಯುನ್ಮಾನ ದ್ವಿಚಕ್ರ ವಾಹನಗಳ ಸಂಖ್ಯೆ 2020ರಲ್ಲಿ ಕೇವಲ 28 ಸಾವಿರದ 508ರಷ್ಟಿದ್ದು, 2021ರಲ್ಲಿ 1 ಲಕ್ಷ 49 ಸಾವಿರದ 68ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು. ಈ ವರ್ಷದ ಅಂತ್ಯದೊಳಗೆ ಪೆಟ್ರೋಲಿಯಂ ಎಂಜಿನ್ ವಾಹನಗಳ ಬೆಲೆ ಎಲೆಕ್ಚ್ರಾನಿಕ್ ವಾಹನಗಳ ದರಕ್ಕೆ ಸಮನಾಗಲಿದ್ದು, ಮುಂದಿನ ದಿನಗಳಲ್ಲಿ ವಿದ್ಯುನ್ಮಾನ ವಾಹನಗಳ ಬಳಕೆ ಮತ್ತಷ್ಟು ಏರಿಕೆಯಾಗಲಿದೆ ಎಂದು ತಿಳಿಸಿದರು.