ಮುಂಬೈ, ಮೇ 25 : ಬಾಲಿವುಡ್ ನಟ ವರುಣ್ ಧವನ್ ಅವರ ಚಿಕ್ಕಮ್ಮ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ನಟ ವರುಣ್ ಧವನ್ ಸಾಮಾಜಿಕ ಜಾಲತಾಣದ ಮುಖಾಂತರ ಈ ದುಃಖಕರ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ನೆಲೆಸಿದ್ದ ವರಣ್ ಧವನ್ ಚಿಕ್ಕಮ್ಮ ಸುಮಾರು ಎಂಟು ವಾರಗಳಿಂದ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಚಿಕ್ಕಮ್ಮನ ಜೊತೆಗಿರುವ ಪೋಟೋವನ್ನು ಹಂಚಿಕೊಂಡಿರುವ ವರುಣ್ ಧವನ್, ಲವ್ ಯೂ ಮಾಶಿ.. ಆರ್.ಐ.ಪಿ’ ಎಂದು ಬರೆದು ಜತೆಗೆ ಗಾಯತ್ರಿ ಮಂತ್ರವನ್ನೂ ಬರೆದುಕೊಂಡಿದ್ದಾರೆ.ಇತ್ತೀಚೆಗೆ ವರುಣ್ ಧವನ್, ತಮ್ಮ ಸಂಬಂಧಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವುದಾಗಿ ತಿಳಿಸಿದ್ದರು. ಕೊರೋನಾ ಸೋಂಕು ನಮ್ಮ ಮನೆಗೆ ತೀರಾ ಹತ್ತಿರವಾಗಿದೆ. ನಮಗೆ ಗೊತ್ತಿರುವ ವ್ಯಕ್ತಿಗಳಿಗೆ ಸೋಂಕು ತಗುಲುವವರೆಗೆ ಅದನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಅದರ ತೀಕ್ಷ್ಣತೆಯನ್ನು ನಾವು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಬಾಲಿವುಡ್ ನ ತಾರೆಯರು ವರುಣ್ ಅವರ ಚಿಕ್ಕಮ್ಮನ ಸಾವಿಗೆ ಕಂಬನಿ ಮಿಡಿದಿದ್ದಾರೆ. ನಟಿಯರಾದ ದಿಯಾ ಮಿರ್ಜಾ, ಸೋಫಿ ಚೌಧರಿ, ಸೋನಲ್ ಚೌಹಾಣ್, ಸೋನಮ್ ಕಪೂರ್, ಮಲೈಕಾ ಕಪೂರ್, ನುಶ್ರತ್ ಬರೂಚಾ ಮುಂತಾದವರು ವರುಣ್ ಚಿಕ್ಕಮ್ಮನ ಸಾವಿಗೆ ಆಘಾತ ವ್ಯಕ್ತಪಡಿಸಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಕೊರೋನಾ ವೈರಸ್ ಅದೆಷ್ಟು ಕ್ರೂರಿಯೆಂದರೆ ಚಿಕ್ಕಮ್ಮನ ಮಗಳು ಪ್ರತಿದಿನ ಆಸ್ಪತ್ರೆಯ ಒಳಗೆ ಪ್ರವೇಶವಿಲ್ಲದ ಕಾರಣ ಹೊರಗೆ ಕಾರ್ ನಲ್ಲಿ ಕುಳಿತು ತನ್ನ ಅಮ್ಮನಿಗಾಗಿ ಪ್ರಾರ್ಥಿಸುತ್ತಿದ್ದಳು ಎಂದು ವರುಣ್ ಸಂಬಂಧಿ, ನಿರ್ದೇಶಕ ಕುನಾಲ್ ಕೊಹ್ಲಿ ತಿಳಿಸಿದ್ದಾರೆ.






