ರಾಮನಗರ : ಇಷ್ಟು ದಿನ ಗ್ರೀನ್ ಝೋನ್ ನಲ್ಲಿದ್ದ ರಾಮನಗರಕ್ಕೆ ಕೊರೋನಾ ವೈರಸ್ ಆವರಿಸಿದೆ. ರೇಷ್ಮೆ ನಾಡು ರಾಮನಗರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಕೆಎಸ್.ಆರ್. ಟಿ ಸಿ ಬಸ್ ಡೈವರ್ ಗೆ ಕೊರೊನಾ ಪಾಸಿಟಿವ್ ಕೇಸ್ ದೃಡವಾಗಿದೆ. ಡ್ರೈವರ್ ಕಳೆದ ಐದು ದಿನಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿದ್ದನು. ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ತಪಾಸಣೆ ನಡೆಸಲಾಗಿತ್ತು. ಆದರೆ ಡಿಪೋ ಮ್ಯಾನೇಜರ್, ಕೊರೊನಾ ವರದಿ ಬರುವ ಮುನ್ನವೇ ಡ್ಯೂಟಿ ಮಾಡಲು ಅನುಮತಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸೋಂಕಿತ ಡ್ರೈವರ್ ಮೂರು ದಿನಗಳ ಕಾಲ ಮಾಗಡಿ – ಬೆಂಗಳೂರು ಲೈನ್ ಡ್ಯೂಟಿ ಮಾಡಿದ್ದಾರೆ.
ಅಲ್ಲದೆ ಕೆಲಸದ ಅವದಿಯಲ್ಲಿ ಡ್ರೈವರ್ ಅನ್ನು ಪ್ರಯಾಣಿಕರು ಸಂಪರ್ಕಿಸಿದ್ದಾರೆ. ಹಾಗಾಗಿ ಬಸ್ ನಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕರ ಮೇಲೆ ನಿಗಾ ಹಿಡಲಾಗಿದೆ. ಇನ್ನೂ ಡ್ರೈವರ್ ಮಾಗಡಿಯ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ತನ್ನ ಸಹ ಸಿಬ್ಬಂದಿಗಳ ಜೊತೆ ಊಟ ತಿಂಡಿ ಸೇವಿಸಿದ್ದಾನೆ. ಹಾಗಾಗಿ ಡಿಪೋದಲ್ಲಿ ಮತ್ತು ಸಿಬ್ಬಂದಿಗಳಲ್ಲಿ ಆತಂಕ ಹೆಚ್ಚಾಗಿದೆ. ಮತ್ತೊಂದೆಡೆ ಮಾಗಡಿಯ ಕುದೂರು ಬಳಿಯ ಮಾರಸಂದ್ರ ಗ್ರಾಮದ ಮಗುವಿಗೆ ಕೊರೊನಾ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಎರಡೂವರೆ ವರ್ಷದ ಮಗುವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವಶಕ್ಕೆ ಪಡೆದಿದ್ದಾರೆ. ಸೋಂಕಿತ ಮಗುವನ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ತಮಿಳುನಾಡಿನ ಚೆನ್ನೈನಿಂದ ಮಗುವಿನ ಕುಟುಂಬ ರಾಮನಗರಕ್ಕೆ ಬಂದಿದೆ. ಕುಟುಂಬವನ್ನ ಕ್ವಾರಂಟೈನ್ ಮಾಡಲಾಗಿತ್ತು. ಮಾರಸಂದ್ರ ಗ್ರಾಮದಲ್ಲಿ 80 ಮನೆಗಳಿವೆ. ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡುವ ಸಾಧ್ಯತೆಯಿದೆ.








