ಹೋಳಿ ಆಚರಣೆ ಸಂದರ್ಭದಲ್ಲಿ ವ್ಯಕ್ತಿ ಮೇಲೆ ಆಸಿಡ್ ಎರಚಿದ ದಾಳಿಕೋರರು
ಹೋಳಿ ಆಚರಣೆಯ ನಡುವೆಯೇ ಬಿಹಾರದ ನಳಂದ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ವ್ಯಕ್ತಿಯೊಬ್ಬನ ಮೇಲೆ ಆ್ಯಸಿಡ್ ಎರಚಿದೆ. ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ನಧಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಸಂತ್ರಸ್ತನನ್ನ ಗುರುತಿಸಲು ತನಿಖೆ ನಡೆಸಲಾಗುತ್ತಿದೆ” ಎಂದು ನಳಂದ ಜಿಲ್ಲೆಯ ಹಿಲ್ಸಾ ವ್ಯಾಪ್ತಿಯ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಕೃಷ್ಣ ಮುರಾರಿ ಪ್ರಸಾದ್ ಹೇಳಿದ್ದಾರೆ. ” ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೂ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ಪಡೆದಾಗ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಆದರೆ, ಅಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಗ್ರಾಮಸ್ಥರು ಅವರ ಮೇಲೆ ಕಲ್ಲು ತೂರಾಟ ನಡೆಸಿದರು.
ಪ್ರದೇಶದಲ್ಲಿ ಪರಿಸ್ಥಿತಿ ಅತ್ಯಂತ ಉದ್ವಿಗ್ನವಾಗಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರ ದೊಡ್ಡ ತಂಡ ಗ್ರಾಮದಲ್ಲಿ ಮೊಕ್ಕಾಂ ಹೂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಆರೋಪಿಗಳು ಅದೇ ಗ್ರಾಮದವರಾಗಿದ್ದರಿಂದ ಸ್ಥಳೀಯರು ಅವರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಶಂಕಿತರು ಶರಣಾಗುವಂತೆ ಒತ್ತಾಯಿಸಲು ಪೊಲೀಸರು ಕುಟುಂಬ ಸದಸ್ಯರಿಗೆ ಒತ್ತಾಯಿಸಿದ್ದಾರೆ.








