ಬೆಂಗಳೂರು – ಚೆನ್ನೈ ರಸ್ತೆ ಸಂಚಾರ ಅವಧಿ 2 ಗಂಟೆಗೆ ಇಳಿಕೆ – ನಿತಿನ್ ಗಡ್ಕರಿ
2024ರ ವೇಳೆಗೆ ಭಾರತದ ರಸ್ತೆ ಜಾಲ ಮತ್ತು ಮೂಲಸೌಕರ್ಯ ವ್ಯವಸ್ಥೆ ಅತ್ಯಾಧುನಿಕವಾಗಿ ಮೇಲ್ದರ್ಜೆಗೆ ಏರಲಿದೆ ಎಂದು ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿಂದು ಹೇಳಿದ್ದಾರೆ. ಇನ್ನೆರಡು ವರ್ಷಗಳಲ್ಲಿ ದೇಶದ ರಸ್ತೆ ಸಂಪರ್ಕ ಜಾಲ ಅಮೆರಿಕ ದೇಶದಂತಹ ಮುಂದುವರೆದ ರಾಷ್ಟ್ರಗಳಿಗೆ ಸಮನಾಗಲಿದೆ.ಇದರಿಂದ ಸಾರಿಗೆ ಸಂಪರ್ಕ ಉತ್ತಮಗೊಳ್ಳುವುದರ ಜೊತೆಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದ್ದು, ಕೃಷಿ ಮತ್ತು ಪ್ರವಾಸೋದ್ಯಮ ವಲಯಗಳೂ ಅಭಿವೃದ್ಧಿಗೊಳ್ಳಲಿವೆ ಎಂದು ಸಚಿವರು ತಿಳಿಸಿದರು.
ಜಮ್ಮು-ಕಾಶ್ಮೀರ, ಲಡಾಕ್ ನಲ್ಲಿ ರಸ್ತೆ ಅಭಿವೃದ್ಧಿಗಾಗಿ 7 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಲಾಗಿದ್ದು, ಲಡಾಕ್ ಮತ್ತು ಲೇಹ್ ನಡುವೆ ಝೋಜಿಲಾ ಸುರಂಗ 2024ರೊಳಗೆ ಪೂರ್ಣಗೊಳ್ಳಲಿದೆ. ಮನಾಲಿಯಲ್ಲಿ ನಿರ್ಮಿಸಲಾಗಿರುವ ಅಟಲ್ ಸುರಂಗದಿಂದಾಗಿ ಪ್ರಯಾಣ ಅವಧಿ ಗಣನೀಯ ಇಳಿಕೆಯಾಗಿದ್ದು, ಸಾರಿಗೆ ಸಂಪರ್ಕ ಉತ್ತಮಗೊಂಡಿದೆ ಎಂದು ಅವರು ತಿಳಿಸಿದರು.
ಗುಣಮಟ್ಟದ ರಸ್ತೆಯಿಂದಾಗಿ ಇನ್ನು ಕೆಲವೇ ವರ್ಷಗಳಲ್ಲಿ ಬೆಂಗಳೂರು – ಚೆನ್ನೈ ನಡುವಿನ ಪ್ರಯಾಣ ಅವಧಿ ಕೇವಲ 2 ಗಂಟೆಗೆ ಇಳಿಯಲಿದ್ದು, ಮುಂಬೈ-ಶ್ರೀನಗರ ನಡುವಿನ ಸಂಚಾರ ಅವಧಿ 20 ಗಂಟೆಗೆ ಇಳಿಕೆಯಾಗಲಿದೆ ಎಂದು ಅವರು ತಿಳಿಸಿದರು. ದೇಶಾದ್ಯಂತ 22 ಹಸಿರು ಹೆದ್ದಾರಿ ಕಾರಿಡಾರ್ ನಿರ್ಮಿಸಲಾಗುತ್ತಿದ್ದು, ನೂತನ ರಸ್ತೆ ನಿರ್ಮಾಣಕ್ಕಾಗಿ ಕಡಿಯಲಾದ ಮರಗಳ ಬದಲಿಗೆ ಸಸಿ ನೆಡುವಿಕೆ ಮತ್ತು ಹೊಸ ಮರಗಳನ್ನು ಬೆಳೆಸಲು ಒಂದು ಸಾವಿರ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ ಎಂದು ಅವರು ತಿಳಿಸಿದರು.