ಸಿದ್ದರಾಮಯ್ಯ ಬುದ್ದಿವಂತರು ಅಂದುಕೊಂಡಿದ್ದಾರೆ. ಅಹಂಕಾರದಿಂದ ಹೇಳಿಕೆ ನೀಡುತ್ತಿದ್ದಾರೆ : ಶ್ರೀರಾಮುಲು
ಬಳ್ಳಾರಿ: ಸಿದ್ದರಾಮಯ್ಯ ಬುದ್ದಿವಂತರು ಅಂದುಕೊಂಡಿದ್ದಾರೆ. ಅಹಂಕಾರದಿಂದ ಹೇಳಿಕೆ ನೀಡುತ್ತಿದ್ದಾರೆ. ರಾಜಕಾರಣಕ್ಕಾಗಿ ಗುರು ಪರಂಪರೆಯನ್ನು ಅವಮಾನ ಮಾಡಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ಪರಿಸ್ಥಿತಿ ತುಘಲಕ್ ರೀತಿ ಆಗಿದೆ. ಸಿದ್ದರಾಮಯ್ಯ ಪರಿಸ್ಥಿತಿ ನೆನಪಿಸಿಕೊಂಡರೆ ನೋವಾಗುತ್ತದೆ. ಅವರ ನಾಲಿಗೆ ಮೇಲೆ, ಅವರ ಮಾತುಗಳ ಮೇಲೆ ಅವರಿಗೆ ಹಿಡಿತ ಇಲ್ಲ. ಪರಮಪೂಜ್ಯರ ವಿರುದ್ಧ ಮಾತನಾಡಿರುವುದಕ್ಕೆ ರಾಜ್ಯಾದೆಲ್ಲೆಡೆ ಖಂಡನೆ ವ್ಯಕ್ತವಾಗಿದೆ. ಸ್ವಾಮೀಜಿಗಳಿಗೆ ಅಪಮಾನ ಮಾಡಿರುವ ಸಿದ್ದರಾಮಯ್ಯನವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ ಸಿದ್ದರಾಮಯ್ಯನವರ ಆತ್ಮವಿಶ್ವಾಸ ಇತ್ತೀಚಿಗೆ ಕಡಿಮೆ ಆಗಿದೆ. ಸಿದ್ದರಾಮಯ್ಯ ಖಿನ್ನತೆಯಲ್ಲಿದ್ದಂತೆ ಕಾಣುತ್ತದೆ. ಸಿದ್ದರಾಮಯ್ಯ ಅವರು ಪಕ್ಷದಲ್ಲಿ ಏಕಾಂಗಿಯಾಗಿದ್ದಾರೆ. ಪಕ್ಷ ಅವರನ್ನು ದೂರತಳ್ಳುತ್ತಿದೆ ಎನ್ನುವ ಖಿನ್ನತೆಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ವ್ಯವಸ್ಥೆ 2-3 ತುಂಡು ಆಗಿದೆ. ಪಕ್ಷದ ವ್ಯವಸ್ಥೆ ವಿರುದ್ಧ ಅವರ ಶಾಸಕರು ಒಂಟಿಯಾಗಿದ್ದಾರೆ. ಸಿದ್ದರಾಮಯ್ಯ ಕಡೆ ಹೋದರೆ ಡಿಕೆಶಿಗೆ ಸಿಟ್ಟು. ಡಿಕೆಶಿಗೆ ಕಡೆ ಹೋದರೆ ಸಿದ್ದರಾಮಯ್ಯಗೆ ಸಿಟ್ಟು ಬರುತ್ತದೆ ಎಂದರು.
ನಮ್ಮ ಪಕ್ಷದ ಜೊತೆ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಗೆಲುವು ಖಚಿತ ಅಂದುಕೊಂಡಿದ್ದಾರೆ. ಹೈಕಮಾಂಡ್ ಗಮನಕ್ಕೂ ಈ ವಿಚಾರ ತರಲಾಗಿದೆ. ಸಂಪುಟ ವಿಸ್ತರಣೆ ಆಕ್ಷಾಂಕಿಗಳು ತುಂಬಾ ಇದ್ದಾರೆ. ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿಳಿಸಿದ್ದಾರೆ.
ನಾವೂ ಚುನಾವಣೆಗೆ ತಯಾರಿಯಾಗಿದ್ದೇವೆ. ಪಂಚ ರಾಜ್ಯಗಳ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ನಾಯಕರ ಪರಿಸ್ಥಿತಿ ಹೀನಾಯವಾಗಿದೆ. 2023ರಲ್ಲಿ ರಾಜ್ಯದಲ್ಲಿ ಬಿಜೆಪಿ 170ಕ್ಕೂ ಹೆಚ್ಚು ಸ್ಥಾನಗಳಿಸುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಎಸ್‍ವೈ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ. ನಾನು ಯಾರ ವಿರುದ್ಧವಾದರೂ ಸ್ಪರ್ಧೆ ಮಾಡಲು ಸಿದ್ದ. ನಾನು ಸ್ಪರ್ಧೆ ಮಾಡುವ ಕುರಿತು ಹೈಕಮಾಂಡ್ ಜೊತೆ ಚರ್ಚೆ ಮಾಡಬೇಕಿದೆ ಎಂದು ಹೇಳಿದರು
ಅಲ್ಲದೇ ಹಿಂದೆ ನನಗೆ 2 ಕಡೆ ಸ್ಪರ್ಧೆಗೆ ಅವಕಾಶ ಕಲ್ಪಿಸಿದ್ದರು. ಈಗಲೂ ಕೂಡ ನನಗೆ ಎರಡು ಕಡೆ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ಹೈಕಮಾಂಡ್ ಹೇಳಿದ ಕಡೆ ಸ್ಪರ್ಧೆ ಮಾಡುವೆ. ಪಕ್ಷ ಸೂಚಸಿದ ಕ್ಷೇತ್ರದಲ್ಲಿ ಯಾರ ವಿರುದ್ಧ ಬೇಕಾದರೂ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ.