SSLC ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳು ಗೈರು
ಬೆಂಗಳೂರು: SSLC ಪರೀಕ್ಷೆ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಮೊದಲು ಮತ್ತು ಎರಡನೇ ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯ 2ನೇ ದಿನವಾದ ಬುಧವಾರ (ಮಾರ್ಚ್ 30) ಸಾವಿರಾರು ವಿದ್ಯಾರ್ಥಿಗಳು ಗೈರಾಗಿದ್ದರು. ದ್ವಿತೀಯ ಭಾಷೆ ಇಂಗ್ಲಿಷ್ಗೆ ಬರೋಬ್ಬರಿ 22,063 ವಿದ್ಯಾರ್ಥಿಗಳು ಗೈರಾಗಿದ್ದರು. ಮೊದಲ ದಿನದ ಪರೀಕ್ಷೆಗಿಂತ ನಿನ್ನೆ ಹೆಚ್ಚು ವಿದ್ಯಾರ್ಥಿಗಳು ಗೈರಾಗಿರುವುದು ಶಿಕ್ಷಣ ಇಲಾಖೆಗೆ ತಲೆನೋವಾಗಿದೆ.
ಇನ್ನೂ ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ 195 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಮೊದಲ ದಿನದ ಪರೀಕ್ಷೆಯಲ್ಲಿ 20,994 ವಿದ್ಯಾರ್ಥಿಗಳು ಗೈರಾಗಿದ್ದರು. ಎರಡನೇ ದಿನದ ಪರೀಕ್ಷೆಯಲ್ಲಿ ಬರೋಬ್ಬರಿ 22,063 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ದ್ವಿತೀಯ ಭಾಷೆಯನ್ನು ಒಟ್ಟು 8,68,206 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 8,46,143 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು.
ಈ ಬಗ್ಗೆ ಮಕ್ಕಳನ್ನು ಅಥವಾ ಅವರ ಪೋಷಕರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಮಾಹಿತಿ ಸಂಗ್ರಹಿಸಿ ತಿಳಿಸಬೇಕು ಎಂದು ಶಿಕ್ಷಣ ಇಲಾಖೆ ಮೌಖಿಕ ಸೂಚನೆ ನೀಡಿದೆ.








