ರೋಮ್, ಮೇ 26 : ಕೊರೋನಾ ಸೋಂಕಿನಿಂದ ತತ್ತರಿಸಿ ಹೋಗಿದ್ದ ಇಟಲಿಯಲ್ಲಿ ಇದೀಗ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಗೋಚರಿಸಿದೆ. ಇಟಲಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 300 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು, ಫೆಬ್ರವರಿಯಿಂದೀಚೆಗೆ ದಾಖಲಾದ ಕಡಿಮೆ ಮಟ್ಟದ ಹೊಸ ಪ್ರಕರಣಗಳಾಗಿದೆ.
ಇಟಲಿಯ ನ್ಯಾಷನಲ್ ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿ (NCPA) ಈ ಬಗ್ಗೆ ಮಾಹಿತಿ ನೀಡಿದ್ದು, ಫೆಬ್ರವರಿ 29ರ ಬಳಿಕ ಇಟಲಿಯಲ್ಲಿ ಇದೇ ಮೊದಲ ಬಾರಿಗೆ ಕನಿಷ್ಟ ಪ್ರಮಾಣದಲ್ಲಿ ಹೊಸ ಸೋಂಕಿತರ ಸಂಖ್ಯೆ ದಾಖಲಾಗಿದೆ ಎಂದು ಹೇಳಿದೆ. ಇಲ್ಲಿಯವರೆಗೆ ಇಟಲಿಯಲ್ಲಿ 55,300 ಸಕ್ರಿಯ ಕೊರೋನಾ ವೈರಸ್ ಸೋಂಕಿತರಿದ್ದು, ಈ ಪೈಕಿ 541 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24ಗಂಟೆಯಲ್ಲಿ 92 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಇಟಲಿಯಲ್ಲಿ 2,30,158 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 32,877 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.








