ಲಿಂಗಾನುಪಾತ : 1 ಸಾವಿರಕ್ಕೆ 937 ರಿಂದ 980 ಕ್ಕೆ ಹೆಣ್ಣು ಮಕ್ಕಳ ಸಂಖೆ ಹೆಚ್ಚಳ – ಸ್ಮೃತಿ ಇರಾನಿ
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸೃತಿ ಇರಾನಿ ನಿನ್ನೆ ಬೆಂಗಳೂರಿನಲ್ಲಿ ಇಲಾಖೆಯ ಪ್ರಮುಖ ಯೋಜನೆಗಳ ಕುರಿತು ರಾಜ್ಯಗಳು ಮತ್ತು ಭಾಗಿದಾರರ ಜೊತೆ ವಲಯ ಮಟ್ಟದ ಸಂವಾದದಲ್ಲಿ ಭಾಗಿಯಾಗಿದ್ದರು. ಸಂವಾದದಲ್ಲಿ ಮಿಷನ್ ಶಕ್ತಿ, ಪೋಷಣ್ 2.0, ವಾತ್ಸಲ್ಯ, ಸಕ್ಷಮ ಅಂಗನವಾಡಿ ಸೇರಿದಂತೆ ವಿವಿಧ ಯೋಜನೆಗಳ ಕುರಿತು ವಿಚಾರ ವಿನಿಮಯ ನಡೆಸಲಾಯಿತು.
ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸ್ಮೃತಿ ಇರಾನಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಮತ್ತು ಆರೈಕೆಗೆ ಸಂಬಂಧಪಟ್ಟಂತಹ ಕಾಯಿದೆಯನ್ನು ತಿದ್ದುಪಡಿ ಮಾಡಲಾಗುತ್ತಿದ್ದು, ಜಿಲ್ಲೆಗೊಂದರಂತೆ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಕಾಯಿದೆ ತಿದ್ದುಪಡಿಯಿಂದ ದತ್ತು ಸ್ವೀಕಾರ ಪ್ರಕ್ರಿಯೆಗಳನ್ನು ಸರಳೀಕರಣಗೊಳ್ಳಲಿವೆ ಎಂದರು.
ಸುಮಾರು 18 ಇಲಾಖೆಗಳ ಸಂಯೋಜನೆಯಲ್ಲಿ 40 ಕೋಟಿಗೂ ಅಧಿಕ ಚಟುವಟಿಕೆಗಳನ್ನು ನಡೆಸಲಾಗಿದೆ. ದೇಶದಲ್ಲಿ 14 ಲಕ್ಷ ಅಂಗನವಾಡಿಗಳ ಪೈಕಿ 11 ಲಕ್ಷ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಅವುಗಳಲ್ಲಿ ಆಯ್ದ ಅಂಗನವಾಡಿಗಳಿಗೆ ಮಕ್ಕಳ ಬೆಳವಣಿಗೆಯ ಮೇಲೆ ನಿಗಾ ಇರಿಸುವ ಸಲಕರಣೆಗಳನ್ನು ಅಳವಡಿಸಲಾಗಿದೆ. ಮಿಷನ್ ಶಕ್ತಿ ಯೋಜನೆಯಡಿ 9 ಕೋಟಿ ಮಹಿಳೆಯರು ಮತ್ತು ಮಕ್ಕಳು ಲಾಭ ಪಡೆದಿದ್ದಾರೆ. ಲಿಂಗಾನುಪಾತದಲ್ಲೂ ಸುಧಾರಣೆಯಾಗಿದ್ದು, 1 ಸಾವಿರಕ್ಕೆ 937 ರಿದ್ದ ಹೆಣ್ಣು ಮಕ್ಕಳ ಸಂಖ್ಯೆ 980ಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದರು.








