ನವದೆಹಲಿ : ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಬ್ಯಾಕ್ ಟು ಬ್ಯಾಕ್ ಸುದ್ದಿಗೋಷ್ಠಿಗಳನ್ನು ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದಿನ ಸುದ್ದಿಗೋಷ್ಠಿಯಲ್ಲಿ ಕೇಂದ್ರಕ್ಕೆ ಲೆಫ್ಟ್ ರೈಟ್ ಬಾರಿಸಿದ್ದಾರೆ.
ಇಂದಿನ ಪ್ರೆಸ್ ಮೀಟ್ ನಲ್ಲಿ ರಾಗಾ, ಭಾರತದಲ್ಲಿ ಲಾಕ್ ಡೌನ್ ಸಂಪೂರ್ಣ ವಿಫಲವಾಗಿದೆ. ಲಾಕ್ ಡೌನ್ ಬಳಿಕವೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಏಕೈಕ ದೇಶ ಭಾರತ. ಇಲ್ಲಿ ಲಾಕ್ ಡೌನ್ ಗುರಿ ಮತ್ತು ಉದ್ದೇಶ ವಿಫಲವಾಗಿದೆ. ವಿಫಲವಾದ ಲಾಕ್ ಡೌನ್ ಫಲಿತಾಂಶವನ್ನು ಸದ್ಯ ಭಾರತ ಎದುರಿಸುತ್ತಿದ್ದು, ಸೋಂಕಿನ ಪ್ರಮಾಣ ಗಣನೀಯ ಏರಿಕೆ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕೊರೊನಾ ಲಾಕ್ ಡೌನ್ ಆರಂಭದಲ್ಲಿ ಮುನ್ನೆಲೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ವಿಫಲವಾಗುತ್ತಿದ್ದಂತೆ ಹಿನ್ನಲೆಗೆ ಸರಿದಿದ್ದಾರೆ. ವಿಪಕ್ಷದವರಾಗಿ ನಾವು, ಮೋದಿ ಮತ್ತೆ ದೇಶದ ಮುನ್ನಲೆಗೆ ಬಂದು ಮಾತನಾಡಬೇಕೆಂದು ಮನವಿ ಮಾಡುತ್ತೇವೆ ಎಂದ ರಾಹುಲ್, ಲಾಕ್ ಡೌನ್ ಬಳಿಕ ಸರ್ಕಾರದ ಮುಂದಿನ ನಡೆ ಏನು ಎಂದು ಸ್ಪಷ್ಟಪಡಿಸಬೇಕು. ಹಾಗೇ ಲಾಕ್ ಡೌನ್ ವಿಫಲವಾಗಿದೆ ಸರ್ಕಾರದ ನಿರ್ಧಾರ ಏನು ಎನ್ನುವುದು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ವಿಶೇಷ ಪ್ಯಾಕೇಜ್ ನಿಂದ ಲಾಭವಿಲ್ಲ
ಇಂದಿನ ಸುದ್ದಿಗೋಷ್ಠಿಯಲ್ಲಿ ಕೇಂದ್ರದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಬಗ್ಗೆ ಕಿಡಿಕಾರಿದ ರಾಹುಲ್, ಇಪ್ಪತ್ತು ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ನಿಂದ ಏನು ಲಾಭ ಇಲ್ಲ. ಆರ್ಥಿಕ ಚೇತರಿಕೆಗೆ ನಗದು ಹಣ ವರ್ಗಾವಣೆ ಮಾಡದೆ ಬೇರೆ ಪರಿಹಾರ ಇಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬಲಿಷ್ಠಗೊಳಿಸಿ. ಶೇ.50 ಬಡ ಜನರಿಗೆ 7,500 ಹಣ ವರ್ಗಾವಣೆ ಮಾಡಿ ಇಲ್ಲದಿದ್ದರೆ ದೊಡ್ಡ ಆರ್ಥಿಕ ಮುಗ್ಗಟ್ಟು ದೇಶ ಎದುರಿಸಲಿದೆ ಎಂದು ಎಚ್ಚರಿಸಿದರು. ಇನ್ನು ವಿದೇಶಗಳ ಬಗ್ಗೆ ಸರ್ಕಾರ ಯೋಚನೆ ಮಾಡವುದಲ್ಲ, ನಾವು ಮೊದಲು ನಮ್ಮ ದೇಶದ ಜನರನ್ನು ರಕ್ಷಿಸಬೇಕು. ಬಡವರು ಬದುಕು ಕಟ್ಟಿಕೊಳ್ಳಲು ಸರ್ಕಾರ ಏನು ಮಾಡಲಿದೆ ತಿಳಿಸಲಿ ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.








