ನವದೆಹಲಿ : ನಟಿ ಅನುಷ್ಕಾ ಶರ್ಮಾಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಡಿವೋರ್ಸ್ ಕೊಡಬೇಕೆಂದು ಎಂದು ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ ಸಲಹೆ ನೀಡಿದ್ದಾರೆ. ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾ ನಿರ್ಮಾಣದ ಪಾತಾಳ್ ಲೋಕ್ ಎಂಬ ವೆಬ್ ಸೀರಿಸ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. “ಪಾತಾಳ್ ಲೋಕ್” ನಲ್ಲಿ ಜಾತಿ ನಿಂದನೆ ಮತ್ತು ನೇಪಾಳಿ ಸಮುದಾಯವೊಂದನ್ನು ಅವಮಾನಿಸಲಾಗಿದೆ ಎಂದು ಆರೋಪಿಸಲಾಗಿದ್ದು ಈ ವಿಚಾರವಾಗಿ ಈಗಾಗಲೇ ಅನುಷ್ಕಾಗೆ ನೋಟಿಸ್ ಕೂಡ ನೀಡಲಾಗಿದೆ.
ಈಗ ಬಿಜೆಪಿ ಎಂಎಲ್ ಎ ನಂದಕಿಶೋರ್ ಗುರ್ಜರ್ ಅನುಷ್ಕಾ ಶರ್ಮಾ ಅವರ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ನನ್ನ ಅನುಮತಿ ಇಲ್ಲದೇ ನನ್ನ ಫೋಟೋವನ್ನು ವೆಬ್ ಸೀರಿಸ್ ನಲ್ಲಿ ಬಳಸಲಾಗಿದೆ. ಈ ಮೂಲಕ ಅವರು ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ನನ್ನ ತೇಜೋವಧೆ ಮಾಡಿದ್ದಾರೆ. ಹಾಗಾಗಿ ಅನುಷ್ಕಾ ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ. ಅಲ್ಲದೆ ಈ ವೆಬ್ ಸರಣಿಯನ್ನು ಬ್ಯಾನ್ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಪತ್ರ ಕೂಡ ಬರೆದಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಂದಕಿಶೋರ್, ಅನುಷ್ಕಾ ಶರ್ಮಾ ಅವರು ಈ ರೀತಿ ಮಾಡಿರುವುದು ಸರಿಯಲ್ಲ. ಅವರೇ ಈ ವೆಬ್ ಸೀರಿಸ್ ಅನ್ನು ಬ್ಯಾನ್ ಮಾಡಬೇಕು. ಜೊತೆಗೆ ಅವರ ಪತಿ ವಿರಾಟ್ ಕೊಹ್ಲಿ ದೇಶಕ್ಕಾಗಿ ಆಡುವ ರಾಷ್ಟ್ರೀಯವಾದಿ, ಅವರು ಅನುಷ್ಕಾ ಶರ್ಮಾಗೆ ವಿಚ್ಛೇದನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.








