ಬಸವನಗುಡಿ ಕ್ಷೇತ್ರದಲ್ಲಿ ‘ಭಾಸ್ಕರ’ ಪ್ರವೇಶ.. ರಾಜಕೀಯ ಲೆಕ್ಕಾಚಾರ ಹೇಗಿದೆ..?
ನಮ್ಮ ಲೆಕ್ಕಾಚಾರದಂತೆ ಆಯಿತು. ಬೆಂಗಳೂರು ನಗರದ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷವನ್ನು ಸೇರಲಿದ್ದಾರೆ ಎಂದು ಮೊದಲೇ ಊಹಿಸಿತ್ತು. ಅದಕ್ಕೆ ಸೂಕ್ತ ಕಾರಣಗಳನ್ನು ಉಲ್ಲೇಖಿಸಿತ್ತು. ಅದರಂತೆ ಮೊನ್ನೆ ಭಾಸ್ಕರ್ ರಾವ್ ನೇರಾ ನೇರ ಆಮ್ ಆದ್ಮಿ ಪಕ್ಷದ ಜೇಷ್ಠ ಅರವಿಂದ ಕೇಜ್ರೀವಾಲ್ ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದಾರೆ. ಈ ಕಹಾನಿಗೆ ಹೀಗೊಂದು ಟ್ವಿಸ್ಟ್ ಇರುತ್ತದೆ ಎಂದು ನಾವು ಊಹಿಸಲು ಕಾರಣ ಬಸವನಗುಡಿಯ ಸೋಲರಿಯದ ಸರದಾರ ರವಿ ಸುಬ್ರಹ್ಮಣ್ಯ ಅಲ್ಲ. ಬಸವನಗುಡಿಯ ಬ್ರಾಹ್ಮಣರ ಪುಳಿಯೋಗರೇ ರಾಜಕಾರಣವೂ ಅಲ್ಲ. ಖುದ್ದು ಭಾಸ್ಕರ್ ರಾವ್ ಸಹ ಅಲ್ಲ. ಅದಕ್ಕೆ ಕಾರಣ ಬಸವನಗುಡಿಯಲ್ಲಿ ಮಿಂಚಿನ ಸಂಚಾರ ಮಾಡುತ್ತಿರುವ ಡಾ. ಶಂಕರ್ ಗುಹಾ ಬೆಳ್ಳೂರು.
ರಾಜಗುರು ದ್ವಾರಕನಾಥ್ ಅವರ ಪುತ್ರ ಡಾ ಶಂಕರ್ ಗುಹಾ ಬೆಳ್ಳೂರು, ತಮ್ಮದೇ ಆದ ಐಡೆಂಟಿಟಿ ಸ್ಥಾಪಿಸಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಗುಹಾ, ಬಸವನಗುಡಿಯಲ್ಲಿ ಸುದ್ದಿಮನೆಯ ಮುನ್ನಲೆಯಲ್ಲಿದ್ದಾರೆ. ಗುರು ರಾಘವೇಂದ್ರ ಕೋ ಮತ್ತು ವಸಿಷ್ಠ ಕೋಆಪರೇಟೀವ್ ಬ್ಯಾಂಕ್ ಅಕ್ರಮ ಅವ್ಯವಹಾರಗಳ ವಿರುದ್ಧ ಗುಡುಗುತ್ತಿರುವ ಗುಹಾ, ಪಾದರಸದಂತೆ ಬಸವನಗುಡಿಯ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಇಲ್ಲಿ ಎರಡು ವಿಚಾರಗಳನ್ನು ಗಮನಿಸಬೇಕು. ಭಾಸ್ಕರ್ ರಾವ್ ತಮ್ಮ ಸ್ವಯಂ ನಿವೃತ್ತಿಯ ಅರ್ಜಿ ಹಾಕಿಕೊಂಡಿದ್ದೇ ರಾಜಕಾರಣದ ಅಂಗಳ ಸೇರುವ ಉದ್ದೇಶದಿಂದ ಅನ್ನುವುದು ನಿರ್ವಿವಾದಿತ. ಆದರೆ ಭಾಸ್ಕರ್ ರಾವ್ ಅವರು ತಮ್ಮ ತವರು ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲೇ ಸ್ಪರ್ಧಿಸುತ್ತಾರೆ ಎನ್ನುವುದಾದರೇ ಅವರು ಯಾವ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನುವ ಬಗ್ಗೆ ಒಂದಷ್ಟು ಚರ್ಚೆಗಳಾಗಿದ್ದವು.
ಬಸವನಗುಡಿಯನ್ನು ತನ್ನ ಸ್ವಂತ ಜಹಗೀರು ಮಾಡಿಕೊಂಡಿರುವ ರವಿ ಸುಬ್ರಹ್ಮಣ ಇಲ್ಲಿ ಕಳೆದ ಒಂದೂವರೆ ದಶಕಗಳಿಂದ ಧ್ವಜ ನೆಟ್ಟು ಕೂತಿದ್ದಾರೆ. ಅನಂತ್ ಕುಮಾರ್ ಪಾಳೆಯದಲ್ಲಿ ಬಿಜೆಪಿಯಲ್ಲಿ ಗಟ್ಟಿಯಾಗಿ ತಳವೂರಿದ ರವಿ, ಅನಂತ್ ಕುಮಾರ್ ನಿಧನದ ನಂತರ ಬಿ.ಎಲ್ ಸಂತೋಷ್ ಪಾಳೆಯದಲ್ಲಿ ಗುರುತಿಸಿಕೊಂಡಿದ್ದಾರೆ. ಕ್ಷೇತ್ರದ ಜನರೊಂದಿಗೆ ನೇರವಾಗಿ ಫೋನಿಗೆ ಸಿಗುವ ಶಾಸಕ ಅನ್ನುವ ಕೀರ್ತಿಯೂ ಅವರಿಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ಕದ ತಟ್ಟುವಿದು ಭಾಸ್ಕರ್ ರಾವ್ ಅವರಿಗೆ ಸಾಧ್ಯವಿರಲಿಲ್ಲ. ಅಫ್‌ಕೋರ್ಸ್ ಈ ಭಾಸ್ಕರ್ ರಾವ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಅತ್ಯಂತ ನಿಕಟವರ್ತಿಯಾಗಿದ್ದವರು. ಆದರೆ ಯಡಿಯೂರಪ್ಪನವರೇ ಬೇರೆ ಬಿಜೆಪಿಯೇ ಬೇರೆ.
ಈ ನಿಟ್ಟಿನಲ್ಲಿ ವಿಆರ್‌ಎಸ್ ಅರ್ಜಿ ಹಾಕಿಕೊಂಡವರೇ ಭಾಸ್ಕರ್ ರಾವ್ ತಮ್ಮ ದೃಷ್ಟಿಯನ್ನು ಕಾಂಗ್ರೆಸ್ ಕಡೆಗೆ ತಿರುಗಿಸಿದ್ದರು. ಹೇಗಿದ್ದರೂ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿದೆ. ಹೇಗಾದರೂ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡರೇ ಒಂದು ಟ್ರಯಲ್ ಎಂಡ್ ಎರರ್ ಟ್ರೈ ಮಾಡಿಬಿಡಬಹುದು ಎಂದು ಅವರು ಆಲೋಚಿಸಿದ್ದರು. ಆದರೆ ಅದಾಗಲೇ ದಂಡ ಕಮಂಡಲಗಳ ಸಹಿತ ಬಸವನಗುಡಿಯನ್ನು ಶತಾಯಗತಾಯ ಓಲೈಸಿಕೊಂಡೇ ತೀರುತ್ತೀನಿ ಎಂದು ತಪಸ್ಸಿಗೆ ಕುಳಿತಂತೆ ದೃಢವಾದವರು ಡಾ ಶಂಕರ್ ಗುಹಾ. ಸುಮ್ಮನೇ ನಾಕು ಮಾತುಗಳ ಕಂತೆ ಒಗೆಯುವ ಜಾಯಮಾನದವರು ಖಂಡಿತಾ ಅಲ್ಲ ಗುಹಾ.
ಅತ್ಯಂತ ಚಾಣಾಕ್ಷತನದಿಂದ ತಮ್ಮ ಸರದಿಯ ಪಾನ್ ಮೂವ್ ಮಾಡುತ್ತಿರುವ ಶಂಕರ್ ಗುಹಾ, ಕಾಂಗ್ರೆಸ್‌ನ ಥಿಂಕ್ ಟ್ಯಾಂಕ್ ವಲಯದಲ್ಲಿ ಗುರುತಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ. ಶಂಕರ್ ಗುಹಾ ಅವರ ತಂದೆ ರಾಜಗುರು ದ್ವಾರಕಾನಾಥ್ ಹಾಕಿದ ಗೆರೆಯನ್ನು ದಾಟುವುದಿಲ್ಲ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಇಷ್ಟರ ಮೇಲೆಯೂ ಶಂಕರ್ ಗುಹಾ ನೇರ ಮೂಲಕ್ಕೆ ಕೈಹಾಕಿದ್ದಾರೆ, ಕೈನಲ್ಲಿ ಪಾಶುಪತಾಸ್ತ್ರ ಹಿಡಿದು ಯುದ್ಧಕ್ಕೆ ಸಜ್ಜಾಗಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಇಬ್ಬರೂ ಗುರುರಾಘವೇಂದ್ರ ಕೋ ಆಪರೇಟೀವ್ ಬ್ಯಾಂಕ್ ಮುಳುಗಿಸಿದ ಆರೋಪಿಗಳ ಪರ ನಿಂತಿರುವ ದಾಖಲೆ ಸಂಗ್ರಹಿಸಿಕೊಂಡಿದ್ದಾರೆ. ಗುರುರಾಘವೇಂದ್ರ ಹಾಗೂ ವಸಿಷ್ಠ ಕೋ ಆಪರೇಟೀವ್ ಬ್ಯಾಂಕ್ ಸಂತ್ರಸ್ತರ ಪರವಾಗಿ ಹತ್ತಾರು ಜನಾಂದೋಲನ ನಡೆಸಿದ್ದಾರೆ. ಬೆಳಗಾವಿಯ ಅಧಿವೇಶನದಲ್ಲಿಯೂ ಸಂತ್ರಸ್ತರನ್ನು ಗುಡ್ಡೆ ಹಾಕಿಕೊಂಡು ನ್ಯಾಯ ಕೇಳಿದ್ದಾರೆ. ಇದು ಬಸವನಗುಡಿಯ ಬ್ರಾಹ್ಮಣರಲ್ಲಿ ನಿಧಾನವಾಗಿ ಶಂಕರ್ ಗುಹಾ ಬಗೆಗಿನ ವಿಶ್ವಾಸ ವೃದ್ಧಿಸುವಂತೆ ಮಾಡಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಭಾಸ್ಕರ್ ರಾವ್, ಗತ್ಯಂತರವಿಲ್ಲದೆ ಆಮ್ ಆದ್ಮಿ ಪಕ್ಷದ ಪೊರಕೆ ಹಿಡಿದಿದ್ದಾರೆ. ಹೀಗೇ ಆಗುತ್ತದೆ ಎಂದು ನಾವು ಊಹಿಸಿದ್ದೆವು. ಭಾಸ್ಕರ್ ರಾವ್ ಖಂಡಿತಾ ಜೆಡಿಎಸ್ ಸೇರುವುದಿಲ್ಲ ಅನ್ನುವುದು ನಮಗೆ ನಿಕ್ಕಿಯಾಗಿತ್ತು. ಅಷ್ಟರಲ್ಲಿ ಪಂಚ ರಾಜ್ಯಗಳ ಚುನಾವಣೆಯೂ ಬಂತಲ್ಲ. ಅತ್ತ ಪಂಜಾಬ್ ನಲ್ಲಿ ಆಪ್ ದಿಗ್ವಿಜಯ ಸಾಧಿಸುತ್ತಲೇ ಇತ್ತ ಭಾಸ್ಕರ್ ರಾವ್ ನಿರ್ಧಾರ ದೃಢವಾಗಿತ್ತು. ಆದರೆ ಇಲ್ಲೇ ಕಹಾನಿಯಲ್ಲಿ ರಿಯಲ್ ಟ್ವಿಸ್ಟ್ ಇರುವುದು. ಒಂದೆಡೆ ಅತ್ಯಂತ ಚತುರ ರಾಜಕಾರಣ ಮಾಡುತ್ತಿರುವ ಡಾ ಶಂಕರ್ ಗುಹಾ ಬೆಳ್ಳೂರು, ಬಸವನಗುಡಿಯ ಬ್ರಾಹ್ಮಣ ಮತಗಳನ್ನು ಸೆಳೆಯುವ ಉದ್ದೇಶದಿಂದ ಮತ್ತೊಂದು ಹೊಸ ಹೋರಾಟ ಶುರು ಮಾಡಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣರಿಗೆ ಶೇ.10ರಷ್ಟು ಮೀಸಲಾತಿಯ ನೀತಿಯನ್ನು ರಾಜ್ಯ ಸರ್ಕಾರ ಇನ್ನೂ ನಿಶ್ಚಯಿಸಿಲ್ಲ. ಈಗಾಗಲೇ ಕೇಂದ್ರದ ಈ ಶೇ. 10ರ ಮೀಸಲಾತಿ ನೀತಿಯನ್ನು 11 ರಾಜ್ಯಗಳು ಜಾರಿ ಮಾಡಿವೆ. ಬಿಎಸ್‌ವೈ ತಮ್ಮ ರಾಜೀನಾಮೆ ನೀಡುವ ಕೊನೆಯ ದಿನ ಈ ಬಗ್ಗೆ ಚರ್ಚೆ ನಡೆಸಿದ್ದರಾದರೂ ಅದಿನ್ನೂ ಕಾರ್ಯಗತಗೊಂಡಿಲ್ಲ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಬಡ ಬ್ರಾಹ್ಮಣರಿಗೆ ಮೀಸಲಾತಿ ಜಾರಿ ಮಾಡಲೇಬೇಕು. ಇಲ್ಲವಾದರೆ ಹೋರಾಟ ನಡೆಸುವುದು ಶತ ಸಿದ್ಧ ಎಂದು ಹೇಳುವ ಮೂಲಕ ಗುಹಾ ಅವರು ತಮ್ಮ ಬತ್ತಳಿಕೆಯ ಮಹತ್ವದ ಅಸ್ತ್ರವೊಂದನ್ನು ಪ್ರಯೋಗಿಸಿದ್ದಾರೆ. ಸದ್ಯ ರವಿ ಸುಬ್ರಹ್ಮಣ್ಯರಿಗೆ ಉಗುಳು ನುಂಗುವುದೂ ಕಷ್ಟವಾಗುತ್ತಿದೆ.
ಕಥೆ ಇಷ್ಟಕ್ಕೆ ಮುಗಿದಿಲ್ಲ, ಗುರು ರಾಘವೇಂದ್ರ ಕೋ ಆಪರೇಟೀವ್ ಬ್ಯಾಂಕ್ ಅವ್ಯವಹಾರದ ಸಾಕ್ಷಿ ಇಟ್ಟುಕೊಂಡು ಕೂತಿರುವ ಶಂಕರ್ ಗುಹಾ, ಇದರ ಜೊತೆ ಜೊತೆಗೆ ಅವ್ಯವಹಾರದ ಆರೋಪಿಗಳ ಜೊತೆಗಿನ ರವಿ ಸುಬ್ರಹ್ಮಣ್ಯ ಮತ್ತು ತೇಜಸ್ವಿ ಸೂರ್ಯನ ಆಪ್ತ ಸಂಬಂಧದ ದಾಖಲೆಗಳನ್ನು ಶೇಖರಿಸುತ್ತಿದ್ದಾರೆ. ಹಾಗೆಯೇ ಈ ಚಿಕ್ಕಪ್ಪ ಮಗನ ಬೇನಾಮಿ ವ್ಯವಹಾರಗಳು, ಅಕ್ರಮ ಆಸ್ತಿಗಳ ಲೆಕ್ಕ ಕೇಳಲಿದ್ದಾರೆ. ಇಂತಹ ಹತ್ತಾರಿ ದಿವ್ಯಾಸ್ತ್ರಗಳು ಶಂಕರ್ ಗುಹಾ ಬತ್ತಳಿಕೆಯಲ್ಲಿವೆ. ಬಸವನಗುಡಿಯ ಬ್ರಾಹ್ಮಣ ಸಮುದಾಯದ ಕಲ್ಯಾಣಕ್ಕೆ ನೆರವಾಗಲು ತಾವು ಸದಾ ಸಿದ್ಧ, ಆದರೆ ಈವರೆಗೆ ಶಾಸಕರಾಗಿರುವ ರವಿ ಸುಬ್ರಹ್ಮಣ್ಯ ಅವರ ರಿಪೋರ್ಟ್ ಕಾರ್ಡ್ ಏನು ಎಂದು ಸದ್ಯದಲ್ಲಿಯೇ ಬಹಿರಂಗ ವೇದಿಕೆಯಲ್ಲಿ ಕೇಳಲಿದ್ದಾರೆ ಶಂಕರ್ ಗುಹಾ.
ಇಷ್ಟಾಯಿತಲ್ಲ, ಈಗಲೂ ರವಿ ಸುಬ್ರಹ್ಮಣ್ಯ ಅವರನ್ನು ಬಸವನಗುಡಿಯಲ್ಲಿ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಅಂತದ್ದೊಂದು ಅದ್ಭುತ ಅವಕಾಶವನ್ನು ಶಂಕರ್ ಗುಹಾ ಪಾಲಿಗೆ ತಂದುಕೊಟ್ಟಿದ್ದಾರೆ ಭಾಸ್ಕರ್ ರಾವ್. 2023ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಬಸವನಗುಡಿಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿರುವ ಭಾಸ್ಕರ್ ರಾವ್ ರವಿ ಸುಬ್ರಹ್ಮಣ್ಯನ ಮತಬ್ಯಾಂಕ್ ಒಡೆದರೇ, ಅದರ ಸಂಪೂರ್ಣ ಲಾಭ ಶಂಕರ್ ಗುಹಾರಿಗೆ ಲಭ್ಯವಾಗುತ್ತದೆ. ಒಂದು ವೇಳೆ ಮೂಲತಃ ಬ್ರಾಹ್ಮಣ ಸಮುದಾಯದ ಭಾಸ್ಕರ್ ರಾವ್, ಮುಂಬರುವ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದ ಬ್ರಾಹ್ಮಣ ಮತಗಳನ್ನು ವಿಭಾಗಿಸಿದರೇ, ಬ್ರಾಹ್ಮಣ ಹಾಗೂ ಉಳಿದ ಸಮುದಾಯಗಳ ಕಾಂಗ್ರೆಸ್ ಪಾರಂಪರಿಕ ಮತಬ್ಯಾಂಕ್ ಸಹಾಯದಿಂದ ಹಾಗೂ ಆಡಳಿತ ವಿರೋಧಿ ಅಲೆಯ ಕಾರಣ ಶಂಕರ್ ಗುಹಾ ಗೆಲುವು ನಿಶ್ಚಿತ. ಅದಾದ ಮರುವರ್ಷವೇ ಲೋಕಸಭಾ ಚುನಾವಣೆಗಳೂ ನಡೆಯಲಿವೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷದಿಂದ ಕಣಕ್ಕಿಳಿಯಬಹುದು ಎಂಬ ಲೆಕ್ಕಾಚಾರವೂ ಸದ್ಯ ಚಾಲ್ತಿಯಲ್ಲಿದೆ. ಉಳಿದದ್ದು ಏನೇ ಇರಲಿ ಭಾಸ್ಕರ್ ರಾವ್ ಪರೋಕ್ಷ ಸಹಾಯದಿಂದ ಗುಹಾ ರವಿ ಸುಬ್ರಹ್ಮಣ್ಯರ ಮೂಲಾಧಾರ ಚಕ್ರವನ್ನೇ ಧ್ವಂಸ ಮಾಡಿಬಿಡಬಹುದು. ಅಂತಹ ಸಾಧ್ಯತೆಗಳು ನಿಚ್ಚಳವಾಗಿ ಕಾಣಿಸುತ್ತಿವೆ.
-ವಿಶ್ವಾಸ್ ಭಾರದ್ವಾಜ್