ಲಖಿಂಪುರ ಹಿಂಸಾಚಾರ – ಆರೋಪಿ ಆಶಿಶ್ ಮಿಶ್ರಾ ಜಾಮಿನು ರದ್ದುಗೊಳಿಸಿದ ಸುಪ್ರೀಂ
ಕಳೆದ ವರ್ಷ ಉತ್ತರ ಪ್ರದೇಶದ ಲಖಿಂಪುರದಲ್ಲಿ ನಡೆದ ಹತ್ಯೆ ಪ್ರಕರಣದ ಆರೋಪಿ ಆಶಿಶ್ ಮಿಶ್ರಾ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಅಲ್ಲದೆ ಒಂದು ವಾರದೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ಗೆ ಸೂಚಿಸಿದೆ.
ಆಶಿಶ್ ಮಿಶ್ರಾ ಅವರು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ. ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಲಖಿಂಪುರದಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿ ಸಾವನ್ನಪ್ಪಿದ್ದರು. ಸಚಿವರ ಪುತ್ರ ಕುಳಿತಿದ್ದ ಎಸ್ಯುವಿ ಕಾರನ್ನ ಸಂತ್ರಸ್ತರ ಮೇಲೆ ಹತ್ತಿಸಲಾಗಿದೆ ಎಂದು ಆರೋಪಿಸಲಾಗಿದೆ.
ಆರೋಪಿ ಆಶೀಶ್ ಅವರನ್ನ ಬಂಧಿಸಿದ 4 ತಿಂಗಳ ಬಳಿಕ ಫೆಬ್ರವರಿಯಲ್ಲಿ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು. ಇದೀಗ ಈ ವಿಷಯವನ್ನು ಹೊಸದಾಗಿ ಕೈಗೆತ್ತಿಕೊಳ್ಳುವಂತೆ ಉನ್ನತ ನ್ಯಾಯಾಲಯವು ಹೈಕೋರ್ಟ್ಗೆ ಮನವಿ ಮಾಡಿದೆ.
ಪ್ರಕರಣದ ಎಲ್ಲಾ ಸಾಕ್ಷಿಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ ಎಂದು ರಾಜ್ಯ ಸರ್ಕಾರವು ವಿಚಾರಣೆಯ ಸಂದರ್ಭದಲ್ಲಿ ಭರವಸೆ ನೀಡಿದೆ ಎಂದು ಅರ್ಜಿದಾರರ ವಕೀಲರು ಪ್ರತಿಪಾದಿಸಿದ್ದಾರೆ.
ಕಳೆದ ತಿಂಗಳು, ಸುಪ್ರೀಂ ಕೋರ್ಟ್ ನಿಂದ ನೇಮಕಗೊಂಡ ಸಮಿತಿಯು ಆರೋಪಿಗಳಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿತ್ತು. ಆಗ ಸುಪ್ರೀಂ ಕೋರ್ಟ್ ರಾಜ್ಯದ ಪ್ರತಿಕ್ರಿಯೆ ಕೇಳಿತ್ತು. ವಿಚಾರಣೆಯೊಂದರಲ್ಲಿ ವರದಿಗೆ ಪ್ರತಿಕ್ರಿಯೆ ವಿಳಂಬದ ಬಗ್ಗೆ ರಾಜ್ಯ ಸರ್ಕಾರವೂ ಆರೋಪವನ್ನು ಎದುರಿಸಿತ್ತು.
ಅಕ್ಟೋಬರ್ 3 ರ ಹಿಂಸಾಚಾರದಲ್ಲಿ ಸಾವನ್ನಪ್ಪಿದ ನಾಲ್ವರು ರೈತರಲ್ಲಿ ಜಗ್ಜೀತ್ ಸಿಂಗ್, ಪವನ್ ಕಶ್ಯಪ್ ಮತ್ತು ಸುಖ್ವಿಂದರ್ ಸಿಂಗ್ ಅವರ ಕುಟುಂಬಗಳು ಮೇಲ್ಮನವಿ ಸಲ್ಲಿಸಿದ್ದವು. ಹೈಕೋರ್ಟ್ ತೀರ್ಪು “ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವಲ್ಲ, ಏಕೆಂದರೆ ಯಾವುದೇ ಅರ್ಥಪೂರ್ಣ ಮತ್ತು ಪರಿಣಾಮಕಾರಿ ನೆರವು ದೊರೆಯಲಿಲ್ಲ” ಎಂದು ಆರೋಪಿಸಿದ್ದಾರೆ.