ಧಾರ್ಮಿಕ ಮೆರವಣಿಗೆ ನಡೆಸಲು ಸರಕಾರದ ಅನುಮತಿ ಕಡ್ಡಾಯ : ಸಿಎಂ
ಉತ್ತರ ಪ್ರದೇಶ: ಧಾರ್ಮಿಕ ಮೆರವಣಿಗೆ ನಡೆಸಲು ಸರಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ವಿಚಾರವಾಗಿ ಪ್ರಮುಖ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಅವರು, ಸರ್ಕಾರದ ಅನುಮತಿ ಇಲ್ಲದೇ ಯಾವುದೇ ರೀತಿಯ ಮೆರವಣಿಗೆ, ಶೋಭಾಯಾತ್ರೆ ನಡೆಸುವಂತಿಲ್ಲ. ಅನುಮತಿ ನೀಡುವ ಮೊದಲು ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಬಗ್ಗೆ ಸಂಘಟಕರಿಂದ ಅಫಿಡವಿಟ್ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಉತ್ತರ ಪ್ರದೇಶದ ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಹೊಸದಾಗಿ ಆಯೋಜನೆಗೊಳ್ಳುವ ಯಾವುದೇ ಕಾರ್ಯಕ್ರಮಗಳಿಗೆ ಇದೀಗ ಅನುಮತಿ ನೀಡಲು ಸಾಧ್ಯವಿಲ್ಲ. ಧಾರ್ಮಿಕ ಮೆರವಣಿಗೆ ಗೊತ್ತುಪಡಿಸಿದ ಸ್ಥಳ ಮತ್ತು ರಸ್ತೆಗಳ ಮೂಲಕ ಮಾತ್ರವೇ ಸಾಗಬೇಕು ಎಂದಿದ್ದಾರೆ.
ಮುಂಬರುವ ದಿನಗಳಲ್ಲಿ ಅಕ್ಷಯ ತೃತೀಯ ಮತ್ತು ಈದ್ ಹಬ್ಬ ಒಂದೇ ದಿನ ಬರುವ ಕಾರಣ ಇದಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ದೇಶನ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ. ಸರ್ಕಾರಿ ರಜಾ ದಿನದಂದು ಎಲ್ಲ ಪೊಲೀಸ್ ಅಧಿಕಾರಿಗಳ ರಜೆ ರದ್ದು ಮಾಡಲಾಗಿದೆ.








