PSI ಅಕ್ರಮ ನೇಮಕಾತಿ ಪ್ರಕರಣ – ಅಫಜಲ್‌ಪುರದ ಶಾಸಕ ಎಂ.ವೈ.ಪಾಟೀಲ್ ಅವರ ಗನ್‌ಮ್ಯಾನ್ ಬಂಧನ
ಪಿಎಸ್ ಐ ಅಕ್ರಮ ನೇಮಕಾತಿ ಕುರಿತ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದ್ದು, ಯಾರೇ ತಪ್ಪು ಮಾಡಿದ್ದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲಬುರಗಿಯಲ್ಲಿಂದು ಹೇಳಿದ್ದಾರೆ.
ತನಿಖಾಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ತನಿಖೆಯನ್ನು ತೀವ್ರಗೊಳಿಸಲು ಸೂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೂ ಸಹ ಇಬ್ಬರನ್ನು ಬಂಧಿಸಲಾಗಿದೆ. ಸಿಐಡಿ ತನಿಖೆಯ ಮಧ್ಯಂತರ ವರದಿ ಆಧರಿಸಿ ಮರು ಪರೀಕ್ಷೆ ಮಾಡಬೇಕೇ, ಬೇಡವೇ ಎಂಬುವುದೂ ಸೇರಿದಂತೆ ಇತರ ವಿಚಾರಗಳ ಕುರಿತು ನಿರ್ಧಾರ ಮಾಡಲಾಗುವುದು ಎಂದರು. ಯುಪಿಎಸ್ ಸಿ ಮಾದರಿಯಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದರೂ ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಕುರಿತು ಚಿಂತನೆ ನಡೆದಿದೆ ಎಂದರು.
ಪಿಎಸ್ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಫಜಲ್‌ಪುರದ ಶಾಸಕ ಎಂ.ವೈ.ಪಾಟೀಲ್ ಅವರ ಗನ್‌ಮ್ಯಾನ್ ಅಯ್ಯಾಳಿ ದೇಸಾಯಿ ಹಾಗೂ ರುದ್ರಗೌಡ ಎಂಬುವರನ್ನು ಬಂಧಿಸಲಾಗಿದೆ. ಈ ಪ್ರಕರಣದ ಮೂಲಕ್ಕೆ ಹೋಗಿ ತನಿಖೆ ಮಾಡಲು ಸೂಚಿಸಲಾಗಿದೆ.
”ದಿವ್ಯಾ ಹಾಗರಗಿಯವರು ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ಮೇಲೆ ಕಠಿಣ ಕಾನೂನ ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರವೇ ಸಿಐಡಿ ತನಿಖೆಗೆ ಅನುಮತಿ ನೀಡಿದೆ. ತನಿಖೆ ಮುಕ್ತವಾಗಿ ನಡೆಸಲು ಸೂಚನೆ ನೀಡಿದೆ. ಬೇರೆ ಪಕ್ಷಗಳು ಈ ರೀತಿಯ ಪ್ರಕರಣವನ್ನೇ ಮುಚ್ಚಿಹಾಕಿರುವ ಇತಿಹಾಸ ಇದೆ. ಹಿಂದೆ ಪಿಎಸ್ಐ ಪರೀಕ್ಷೆಗಳು 3-4 ಬಾರಿ ಮಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಉತ್ತೀರ್ಣರಾದ ಅಭ್ಯರ್ಥಿಗಳ ವಿಚಾರಣೆ ನಡೆಯುತ್ತಿದ್ದು, ಮಧ್ಯಂತರ ವರದಿ ಬಂದ ನಂತರ ಮರುಪರೀಕ್ಷೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸಿಐಡಿ ತನಿಖೆ ನಡೆಯುತ್ತಿರುವುದರಿಂದ ಎಲ್ಲಾ ಮಾಹಿತಿಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ,” ಎಂದು ಸಿಎಂ ಹೇಳಿದರು.