ಸಿಎಂಗೆ ಮುತ್ತಿಗೆ ಹಾಕಲು ಯತ್ನಸಿದ ಆಪ್ ಕಾರ್ಯಕರ್ತರು
ಕಲಬುರಗಿ: ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮುತ್ತಿಗೆ ಹಾಕಲು ಯತ್ನಸಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಬಂಧಿಸುವಂತೆ ಆಗ್ರಹಿಸಿ ಎಸ್ ಎಂ ಪಂಡಿತ್ ರಂಗಮಂದಿರದ ಮುಂಭಾಗದಲ್ಲಿ 10ಕ್ಕೂ ಅಧಿಕ ಜನ ಆಪ್ ಕಾರ್ಯಕರ್ತರು ಶುಕ್ರವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ವೇಳೆ ಅವರನ್ನು ಪೊಲೀಸರು ತಡೆದು, ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಕಾರ್ಯಕರ್ತರು ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣವು ದಿನಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಮುಖ ಆರೋಪಿ ದಿವ್ಯಾ ಹಾಗರಗಿ ತೆಲೆಮರೆಸಿಕೊಂಡಿದ್ದು, ಈಕೆಗಾಗಿ ಸಿಐಡಿ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ.
ಈ ನಡುವೆ ಕಲಬುರಗಿ ಪ್ರವಾಸದಲ್ಲಿರುವ ಸಿಎಂ ಮೊಮ್ಮಾಯಿ ಅವರಿಗೆ ಇದು ತೆಲೆಬಿಸಿಯಾಗಿ ಪರಿಣಮಿಸಿದೆ. ಗುರುವಾರ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಸಿಎಂ ಕಾರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು.