ಅಪ್ಪು ಕಂಠಸಿರಿಯಲ್ಲಿ ಮತ್ತೆ ಬಿಡುಗಡೆಯಾದ ಜೇಮ್ಸ್ ಚಿತ್ರ …..
ಕರ್ನಾಟಕ ರತ್ನ ರಾಜ ಪುನೀತ್ ರಾಜ್ ಕುಮಾರ್ ಅವರ ಧ್ವನಿಯಲ್ಲಿ ಜೇಮ್ಸ್ ಚಿತ್ರವನ್ನ ನೋಡಿ ಫ್ಯಾನ್ಸ್ ಸಂತಸ ಪಟ್ಟಿದ್ದಾರೆ. ಅಪ್ಪು ಕೊನೆಯ ಚಿತ್ರವನ್ನ ಅವರದೇ ಧ್ವನಿಯಲ್ಲಿ ಕೇಳಬೇಕು ಎಂಬುದು ಅಭಿಮಾನಿಗಳ ಕೊನೆಯ ಆಸೆಯಾಗಿತ್ತು. ಆ ಆಸೆಯನ್ನ ಚಿತ್ರತಂಡ ಕೊನೆಗೂ ಈಡೇರಿಸಿದೆ. ತಂತ್ರಜ್ಞಾನದ ಸಹಾಯದಿಂದ ಅಪ್ಪು ಧ್ವನಿಯನ್ನ ಮರು ಸೃಷ್ಟಿಮಾಡಲಾಗಿದೆ.
ಅಪ್ಪು ಹುಟ್ಟು ಹಬ್ಬದಂದೆ ಜೇಮ್ಸ್ ಚಿತ್ರವನ್ನ ರಿಲೀಸ್ ಮಾಡಲಾಗಿತ್ತು, ಆದರೆ ಚಿತ್ರಕ್ಕೆ ಶಿವರಾಜ್ ಕುಮಾರ್ ಅವರು ಧ್ವನಿ ನೀಡಿದ್ದರು. ಈಗ ಮತ್ತೆ ಅಪ್ಪು ಅವರ ಕಂಠ ಸಿರಿಯನ್ನ ಕೇಳಿ ಅಭಿಮಾನಿಗಳು ಪುಳಕಗೊಂಡಿದ್ದಾರೆ.
ಚೇತನ್ ಕುಮಾರ್ ನಿರ್ದೇಶನದ ಪುನೀತ್ ನಟನೆಯ ಕಡೆಯ ಚಿತ್ರವನ್ನು ಬಿಡುಗಡೆಯ ದಿನದಂದು ಜಾತ್ರೆಯಂತೆ ಆಚರಿಸಲಾಗಿತ್ತು. ಈಗಲೂ ಹಬ್ಬದಂತೆ ಪುನೀತ್ ಅಭಿಮಾನಿಗಳು ಬರಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ 65 ಚಿತ್ರಮಂದಿರಗಳಲ್ಲಿ ಚಿತ್ರ ಮರು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಪ್ರಿಯಾ ಆನಂದ್, ಪುನೀತ್ ರಾಜ್ ಕುಮಾರ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಜೇಮ್ಸ್ ಸಿನಿಮಾ ಏಪ್ರಿಲ್ 15 ರಿಂದ ಸೋನಿ ಲೈವ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.








