ಬೆಂಗಳೂರು, ಮೇ 28 : ಕರ್ನಾಟಕದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸದಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಯಾವುದೇ ವಿದ್ಯಾರ್ಥಿಗೆ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ರದ್ದುಗೊಳಿಸುವಂತೆ ಕೋರಿ ವಕೀಲ ಲೋಕೇಶ್ ಎಂಬುವವರು ಪಿಐಎಲ್ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರದಿಂದ ಪರೀಕ್ಷೆ ನಡೆಸಲು ಮಾಡಿಕೊಂಡಿರುವ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವಂತೆ ಕೇಳಿತ್ತು. ಅದರಂತೆ ಕರ್ನಾಟಕ ಸರ್ಕಾರ ಪರೀಕ್ಷೆ ನಡೆಸಲು ಮಾಡಿಕೊಂಡಿರುವ 6 ಪುಟಗಳ ಮಾರ್ಗಸೂಚಿಗಳನ್ನು ನ್ಯಾಯಪೀಠ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ಹೈಕೋರ್ಟ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಪರೀಕ್ಷೆ ನಡೆಸುವಂತೆಯೂ, ಯಾವುದೇ ವಿದ್ಯಾರ್ಥಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆಯೂ ಸರ್ಕಾರಕ್ಕೆ ಆದೇಶಿಸಿ ಪ್ರಕರಣ ಇತ್ಯರ್ಥಗೊಳಿಸಿತು.








