370ನೇ ವಿಧಿ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಮುಂದಕ್ಕೆ: ಸುಪ್ರಿಂ ಕೋರ್ಟ
ನವದೆಹಲಿ: ಜಮ್ಮು&ಕಾಶ್ಮೀರದಲ್ಲಿ ಜಾರಿಗೆ ಇದ್ದ 370ನೇ ವಿಧಿಯನ್ನು ರದ್ದು ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸದ್ಯಕ್ಕೆ ವಿಚಾರಣೆ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
370ನೇ ವಿಧಿಯನ್ನು ರದ್ದುಗೊಳಿಸಿ 2019ರಲ್ಲಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಎರಡು ಬೇರೆ ಬೇರೆ ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು.
2019 ರಲ್ಲಿ ಮಾಜಿ ಸಿಜೆಐ ರಂಜನ್ ಗೊಗೊಯ್ ಅವರಿಂದ ಸಿಜೆಐ ಎನ್.ವಿ.ರಮಣರವರ ಪೀಠಕ್ಕೆ ಅರ್ಜಿಗಳು ವರ್ಗಾವಣೆಗೊಂಡವು. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿರೇಖೆಗಳನ್ನು ಗುರುತಿಸಲಾಗುತ್ತಿದ್ದು. ಈ ಸಂದರ್ಭದಲ್ಲಿ ತುರ್ತಾಗಿ ಅರ್ಜಿಗಳನ್ನು ವಿಚಾರಿಸುವಂತೆ ಕೋರಿ ಹಿರಿಯ ವಕೀಲ ಶೇಖರ್ ನಾಫ್ಡೇ ಸಿಜೆಐ ಎನ್.ವಿ ರಮಣರನ್ನೊಳಗೊಂಡ ಐವರು ಸದಸ್ಯರ ನ್ಯಾಯಪೀಠವನ್ನು ಕೋರಿಕೊಂಡಿದ್ದರು.
ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯ ಮೂರ್ತಿಯವರು “ಇದು ಐವರು ನ್ಯಾಯಾಧೀಶರ ಪೀಠದ ವಿಷಯ. ಕೆಲವು ನಿವೃತ್ತಿಗಳು ಸಹ ನಡೆಯಲಿದೆ. ಅದ್ದರಿಂದ ನಾನು ಬೇರೆ ನ್ಯಾಯಾಧೀಶರ ಅಭಿಪ್ರಾಯಗಳನ್ನು ಕೇಳಬೇಕಾಗಿದೆ. ಬೇಸಿಗೆ ರಜೆಯ ನಂತರ ನೋಡೋಣ” ಎಂದಿದ್ದಾರೆ.