PSI ಅಕ್ರಮ ನೇಮಕಾತಿ ಪ್ರಕರಣ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ
ಕಲಬುರಗಿ: PSI ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಕರಣದ ಕ್ವೀನ್‍ಪಿನ್ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿ ಕಳೆದ 18 ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಇವರನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಮಹಾರಾಷ್ಟ್ರದ ಪುಣೆಯ ಹೋಟೆಲ್‍ವೊಂದರ ಬಳಿ ಬಂಧಿಸಿದ್ದಾರೆ. ಇಂದು ಸಿಐಡಿ ಎಸ್‌ಪಿ. ರಾಘವೇಂದ್ರ ಹೆಗಡೆ, ಡಿವೈಎಸ್‍ಪಿ, ಪ್ರಕಾಶ್ ರಾಠೋಡ್, ಡಿವೈಎಸ್‍ಪಿ ಶಂಕರಗೌಡ ನೇತೃತ್ವದ ತಂಡದಿಂದ ದಿವ್ಯಾ ಹಾಗರಗಿಯನ್ನು ಬಂಧಿಸಲಾಗಿದೆ.
ಇದೇ ವೇಳೆ ಮತ್ತೋರ್ವ ಆರೋಪಿಯಾಗಿದ್ದ ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿ ಹಾಗೂ ಶಿಕ್ಷಕಿ ಅರ್ಚನಾರನ್ನು ಸಹ ಅಧಿಕಾರಿಗಳು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪುಣೆಯ ಹೋಟೆಲ್‍ವೊಂದರಲ್ಲಿ ತಂಗಿದ್ದರು. ಸದ್ಯ ಅಧಿಕಾರಿಗಳು ದಿವ್ಯಾ ಹಾಗರಗಿಯನ್ನು ಪುಣೆಯಿಂದ ಕಲಬುರಗಿಗೆ ಕರೆತರುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಇನ್ನೂ ಐವರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರನ್ನು ವಿಚಾರಣೆ ನಡೆಸಿ ಅಕ್ರಮದಲ್ಲಿ ಭಾಗಿಯಾಗಿದ್ದರೆ, ಅರೆಸ್ಟ್ ಮಾಡಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಹಾಗೇ ದಿವ್ಯಾ ಹಾಗರಗಿಗೆ ಮಹಾರಾಷ್ಟ್ರದಲ್ಲಿ ಸಹಾಯ ಮಾಡಿದ್ದ ಸೊಲ್ಲಾಪುರದ ಉದ್ಯಮಿ ಸುರೇಶ್ ನನ್ನು ಸಿಐಡಿ ಅಧಿಕಾರಿಗಳು ಬಂಧಿದ್ದಾರೆ. ಈತ ದಿವ್ಯಾ ಹಾಗರಗಿಗೆ ಆಶ್ರಯ ಕೊಟ್ಟಿದ್ದ ಎನ್ನಲಾಗುತ್ತಿದೆ.
ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಎಸ್‍ಐ ನೇಮಕಾತಿ ಪರೀಕ್ಷೆ ವೇಳೆ ಅಕ್ರಮ ನಡೆದಿತ್ತು. ಇತ್ತೀಚೆಗಷ್ಟೇ ಈ ಪ್ರಕರಣದ ಪ್ರಮುಖ ಆರೋಪಿಯಾದ ಅಫಜಲಪುರ ಬ್ಲಾಕ್‍ನ ಕಾಂಗ್ರೆಸ್ ಅಧ್ಯಕ್ಷನ ಸಹೋದರನಾಗಿರುವ ಕಿಂಗ್ ಪಿನ್ ಆರ್.ಡಿ.ಪಾಟೀಲ್‍ನನ್ನು ಪೊಲೀಸರು ಬಂಧಿಸಿದ್ದರು.