ಗರ್ಭಿಣಿ ಪತ್ನಿಗೆ ಆ್ಯಸಿಡ್ ಕುಡಿಸಿ ಕೊಲೆಗೈದ ಪತಿ
ಹೈದರಾಬಾದ್: ತೆಲಂಗಾಣದ ನಿಜಾಮಾಬಾದ್‍ನ ವರ್ಣಿ ಮಂಡಲದ ರಾಜಪೇಟ್ ತಾಂಡಾದಲ್ಲಿ ಗರ್ಭಿಣಿ ಪತ್ನಿಗೆ ಶೌಚಾಲಯ ಸ್ವಚ್ಛಗೊಳಿಸುವ ಆ್ಯಸಿಡ್ ಕುಡಿಸಿ ಪತಿ ಪರಾರಿಯಾಗಿರುವ ಘಟನೆ ನಡೆದಿದೆ.
ಕಲ್ಯಾಣಿ ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಆರೋಪಿ ತರುಣ್ ಏಪ್ರಿಲ್ 27 ರಂದು ಪತ್ನಿಗೆ ಬಲವಂತವಾಗಿ ಆ್ಯಸಿಡ್ ಕುಡಿಸಿ ಕೊಲೆಮಾಡಿದ್ದಾನೆ. ನಂತರ ಸ್ಥಳದಿಂದ ಆರೋಪಿ ಕಾಲ್ಕಿತ್ತಿದ್ದಾನೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿ ತರುಣ್ ಹಾಗೂ ಕಲ್ಯಾಣಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೂರು ತಿಂಗಳ ಹಿಂದೆ ಕಲ್ಯಾಣಿ ಗರ್ಭಿಣಿಯಾದ ಬಳಿಕ ತರುಣ್ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ನೀನು ನೋಡಲು ಚೆನ್ನಾಗಿಲ್ಲ, ಕುಟುಂಬಸ್ಥರಿಂದ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಸದಾ ಪೀಡಿಸುತ್ತಿದ್ದನು.
ಇದೇ ರೀತಿ ಮಂಗಳವಾರ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ತರುಣ್ ಕಲ್ಯಾಣಿಗೆ ಶೌಚಾಲಯ ಕ್ಲೀನಿಂಗ್ ಲಿಕ್ವಿಡ್ ಬಲವಂತವಾಗಿ ಕುಡಿಸಿದ್ದಾನೆ ಎನ್ನಲಾಗುತ್ತಿದೆ. ಇದರಿಂದ ತೀವ್ರ ಅಸ್ವಸ್ಥಳಾಗಿದ್ದ ಕಲ್ಯಾಣಿಯನ್ನು, ಆಕೆಯ ಕುಟುಂಬಸ್ಥರು ಚಿಕಿತ್ಸೆಗಾಗಿ ನಿಜಾಮಾಬಾದ್‍ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಕಲ್ಯಾಣಿ ಬುಧವಾರ ಮೃತಪಟ್ಟಿದ್ದಾಳೆ.








