ಮೈಸೂರು, ಮೇ 28 : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ರಾಜ್ಯಸಭೆಗೆ ಆಯ್ಕೆ ಆಗುವ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಇದೀಗ ಜಿ.ಟಿ ದೇವೇಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಹೆಚ್.ಡಿ ದೇವೆಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ನನಗೆ ಮೊದಲು ವಿಧಾನಸಭೆಗೆ ಟಿಕೆಟ್ ಕೊಟ್ಟವರು ದೇವೇಗೌಡರು. ಅವರು ರಾಷ್ಟ್ರ ರಾಜಕಾರಣದಲ್ಲಿ ಇರಬೇಕು. ಅವರು ರಾಜ್ಯಸಭೆಗೆ ಸ್ಪರ್ಧೆ ಮಾಡಿದರೆ ಫಸ್ಟ್ ಓಟು ನಾನೇ ಹೋಗಿ ಹಾಕ್ತೀನಿ ಎಂದರು.
ಇದೇ ವೇಳೆ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ರಚಿಸುವ ಬಗ್ಗೆ ಮಾತನಾಡಿದ ಅವರು, ಪಂಚಾಯತಿಗಳಿಗೆ ಸಮಿತಿ ರಚನೆ ಮಾಡುವುದರಿಂದ ಬಿಜೆಪಿ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುವುದಿಲ್ಲ, ಗ್ರಾಮ ಸ್ವರಾಜ್ ದೃಷ್ಠಿಯಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಯಾವುದೇ ಒಂದು ಪಕ್ಷದ ಪಂಚಾಯತ್ ಆಗದೆ, ಸರ್ವರ ಪಂಚಾಯತ್ ಆಗಬೇಕು. ಆಡಳಿತ ಸಮಿತಿ ರಚಿಸಿದರೆ ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ರಿಯಲ್ ಎಸ್ಟೇಟ್‌ನವರು, ಕ್ರಿಮಿನಲ್ ಹಿನ್ನೆಲೆಯುಳ್ಳವರು ಪಂಚಾಯತ್ ಪ್ರವೇಶ ಮಾಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನು ಪಂಚಾಯತ್ ಚುನಾವಣೆಯನ್ನು ಯಾವಾಗಲಾದರೂ ಮಾಡಿ, ಈಗಿರುವ ಸದಸ್ಯರನ್ನೇ ಮುಂದುವರೆಸಿ ಎಂದು ಒತ್ತಾಯಿಸಿದ ಜಿಟಿಡಿ, ಸಿದ್ದರಾಮಯ್ಯನವರನ್ನು ಇದೇ ಕಾರಣಕ್ಕಾಗಿ ಭೇಟಿ ಮಾಡಿದ್ದೇನೆ. ಒಂದು ವೇಳೆ ಆಡಳಿತ ಸಮಿತಿ ರಚಿಸಿದರೆ ಪಂಚಾಯತ್ ಮಟ್ಟದಿಂದ ಹೋರಾಟ ಶುರುವಾಗುತ್ತದೆ ಎಂದು ಎಚ್ಚರಿಸಿದರು.








