PSI ಅಕ್ರಮ ನೇಮಕಾತಿ | ದೊಡ್ಡ ಮೊತ್ತದ ಹಣ ಪಡೆದಿರುವುದಾಗಿ ಬಾಯಿಬಿಟ್ಟ ದಿವ್ಯಾ ಹಾಗರಿಗಿ
ಕಲಬುರಗಿ: PSI ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ದಿವ್ಯಾ ಹಾಗರಿಗಿ ವಿಚಾರಣೆ ವೇಳೆ ಅಕ್ರಮ ನಡೆಸಲು ದೊಡ್ಡ ಮೊತ್ತದ ಹಣ ಪಡೆದಿರುವ ಬಗ್ಗೆ ಸಿಐಡಿ ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾಳೆ.
ಪ್ರಕರಣದ ಕ್ವೀನ್ ಪಿಂಗ್ ದಿವ್ಯಾ ಹಾಗರಗಿ ಅವರನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಮಹರಾಷ್ಟ್ರದ ಪುಣೆಯಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ದಿವ್ಯಾ ಹಾಗರಗಿ ಒಡೆತನದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪರೀಕ್ಷಾ ಅಕ್ರಮದಲ್ಲಿ ಎರಡು ಟೀಂಗಳಿಂದಲೂ ದೊಡ್ಡ ಮೊತ್ತದ ಹಣವನ್ನು ಪಡೆದ ಬಗ್ಗೆ ಪೊಲೀಸ್ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದಾಳೆ.
ಆರ್.ಡಿ.ಪಾಟೀಲ್ ಮತ್ತು ಮಂಜುನಾಥ್ ಗ್ಯಾಂಗ್ ನಿಂದ ದೊಡ್ಡ ಮಟ್ಟದ ಹಣ ಸಂದಾಯ ಮಾಡಿಸಿದ್ದು, ಆರ್.ಡಿ.ಪಾಟೀಲ ಮತ್ತು ಮಂಜುನಾಥ್ ಬಳಿಯಿಂದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಹಣವನ್ನು ಕೊಡಿಸಿದ್ದನು ಎಂದು ಬಾಯಿ ಬಿಟ್ಟಿದ್ದಾಳೆ.
ದಿವ್ಯಾ ಹಾಗರಗಿ, ಆರ್.ಡಿ.ಪಾಟೀಲ್, ಮಂಜುನಾಥ್ ಮಧ್ಯೆ ಮಧ್ಯವರ್ತಿ ಯಾಗಿ ಕಾಶಿನಾಥ್ ಕೆಲಸ ಮಾಡುತ್ತಿದ್ದನು. ಇದರ ಜೊತೆಗೆ ಕಾಶಿನಾಥ್ ಕೂಡ ಅಕ್ರಮದಲ್ಲಿ ದೊಡ್ಡ ಪ್ರಮಾಣದಲ್ಲಿ ಮೊತ್ತವನ್ನು ಪಡೆದಿರುವುದು ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣವು ಬೆಳಕಿಗೆ ಬರುತ್ತಿದ್ದಂತೆ ಕಾಶಿನಾಥ್ ತಲೆಮರೆಸಿಕೊಂಡಿದ್ದಾನೆ.