ಕೆಜಿಎಫ್-2 ಇಡೀ ಭಾರತೀಯ ಚಿತ್ರರಂಗಯೇ ಜಾತಕ ಪಕ್ಷಿಯಂತೆ ಕಾಯುತ್ತಿರುವ ಸಿನಿಮಾ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ನೋಡಿದಾಗ ಪ್ರತಿಯೊಬ್ಬರ ಆಯ್ಕೆಯಲ್ಲಿಯೂ ‘ಕೆಜಿಎಫ್ 2’ಗೆ ಮೊದಲ ಸ್ಥಾನದಲ್ಲಿರುತ್ತೆ. ಕೆಜಿಎಫ್-1 ರಲ್ಲಿ ಗರುಡನ ಕೊಲೆಯೊಂದಿಗೆ ಸಿನಿಮಾ ಅಂತ್ಯವಾಗುತ್ತದೆ. ಆದ್ರೆ ಅಸಲಿ ಕಹಾನಿಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್-2 ನಲ್ಲಿಟ್ಟಿದ್ದಾರೆ. ಕೆಜಿಎಫ್ 2ನೇ ಭಾಗ ಇನ್ನಷ್ಟು ರಸವತ್ತಾಗಿ ಇರಲಿದ್ದು, ಕೌತುಕ ಮೂಡಿಸಿರುವ ಅದರ ಕ್ಲೈಮ್ಯಾಕ್ಸ್ ಸೋರಿಕೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಕೆಜಿಎಫ್ 2 ಚಿತ್ರದ ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ಲಾಕ್ ಡೌನ್ ನಿಯಮ ತೆರವುಗೊಂಡ ಬಳಿಕ ಸುಮಾರು 30 ದಿನಗಳ ಚಿತ್ರೀಕರಣ ನಡೆಸುವ ಅಗತ್ಯವಿದೆ ಎಂದು ಹೇಳಲಾಗಿದೆ. ಆದ್ರೆ ಚಿತ್ರದ ಕ್ಲೈಮ್ಯಾಕ್ಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಬಹುಭಾಷೆಗಳಲ್ಲಿ ಸಿನಿಮಾ ಸಿದ್ಧವಾಗುತ್ತಿರುವುದರಿಂದ ಯಾವುದೋ ಮೂಲದಿಂದ ಕಥೆ ಲೀಕ್ ಆಗಿದೆ. ಇದರಿಂದ ಕೆಜಿಎಫ್ ಚಾಪ್ಟರ್ 2 ಅಂತ್ಯ ಹೇಗಿರಲಿದೆ ಎಂಬುದು ಬಹಿರಂಗವಾಗಿದೆ ಎನ್ನಲಾಗಿದೆ.
ದುರಂತ ಅಂತ್ಯ
ಚಿತ್ರದ ಪೂರ್ತಿ ಅಬ್ಬರಿಸಿ ಬೊಬ್ಬಿರಿಯೋ ರಾಕಿ ಭಾಯ್, ನೂರಾರು ಎದುರಾಳಿಗಳನ್ನು ಪುಡಿಗಟ್ಟಿ ಕ್ಲೈಮ್ಯಾಕ್ಸ್ ನಲ್ಲಿ ದುರಂತ ಅಂತ್ಯ ಕಾಣಲಿದ್ದಾನೆ. ಚಿತ್ರದ ಕ್ಲೈಮ್ಯಾಕ್ಸ್ ಗೆ ನಿರ್ದೇಶಕ ಪ್ರಶಾಂತ್ ನೀಲ್ ಭಾವುಕತೆಯ ಸ್ಪರ್ಶ ನೀಡಲು ಬಯಸಿದ್ದು, ಜನರನ್ನು ಜೀತದಿಂದ ಮುಕ್ತಗೊಳಿಸುವ ರಾಕಿ ಭಾಯ್ ಅಂತ್ಯದಲ್ಲಿ ಸಾಯುತ್ತಾನೆ. ‘
ಸೇನೆಯೊಂದಿಗೆ ಯುದ್ಧ
ಕೆಜಿಎಫ್ – 1ರಲ್ಲಿ ಭಾರಿ ಆಕ್ಷನ್ ಸನ್ನಿವೇಶಗಳನ್ನು ಇಟ್ಟಿದ್ದ ಪ್ರಶಾಂತ್ ನೀಲ್, ಭಾಗ ಎರಡರಲ್ಲೂ ಅದನ್ನು ಮುಂದುವರಿಸಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ ಅಧೀರನನ್ನು ಮಟ್ಟಹಾಕುವ ರಾಕಿ ಭಾಯ್ ಹಾವಳಿ ಜಾಸ್ತಿಯಾಗುತ್ತದೆ. ಹೀಗಾಗಿ ಪ್ರಧಾನಿ ಸೇನೆಯನ್ನು ಕಳಿಹಿಸುತ್ತಾರೆ. ಈ ವೇಳೆ ಸೇನೆ ವಿರುದ್ಧ ರಾಕಿಭಾಯ್ ಪಡೆ ಹೋರಾಡುತ್ತದೆ. ಈ ದೃಶ್ಯಗಳು ತುಂಬಾ ರೋಚಕತೆಯಿಂದ ಕೂಡಿರಲಿದೆ.
ಶ್ರೀಮಂತನಾಗಿ ಸಾಯುತ್ತಾನೆ ರಾಕಿ ಭಾಯ್
ಸೇನೆಯೊಂದಿಗೆ ಹೋರಾಡೋ ರಾಕಿ ಭಾಯ್ ಕೊನೆಗೆ ದುರಂತ ಅಂತ್ಯ ಕಾಣುತ್ತಾನೆ. ಆದ್ರೆ ಆತನಿಗೆ ಚಿಕ್ಕಂದಿನಲ್ಲಿ ಅಮ್ಮ ಹೇಳಿದಂತೆಯೇ ಶ್ರೀಮಂತನಾಗಿ ಸಾಯುತ್ತಾನೆ. ಇಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಎಮೋಷನ್ ಟಚ್ ನೀಡಲಿದ್ದು, ಸಿನಿಮಾದ ಅಂತ್ಯದಲ್ಲಿ ಪ್ರೇಕ್ಷಕನ ಕಣ್ಣಲ್ಲಿ ನೀರು ಜಿನುಗಿಸುವ ಉದ್ದೇಶ ನಿರ್ದೇಶಕರದ್ದು ಎನ್ನಲಾಗಿದೆ.






