ಕಳೆದ ರಾತ್ರಿ ಸುರಿದ ಮಳೆಗೆ ಅಸುನೀಗಿದ ಕರು ಹಾಗೂ ಮೇಕೆಗಳು
ರಾಮನಗರ: ನಿನ್ನೆ ರಾತ್ರಿ ಜಿಲ್ಲೆಯಾದ್ಯಂತ ಸುರಿದ ಮಳೆಗೆ ಕರು ಹಾಗೂ ಮೇಕೆಗಳು ಅಸುನೀಗಿವೆ.
ಸುಮಾರು ಎರಡು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದು, ಬಿಡದಿಯ ನಾರಾಯಣ, ಕುಮಾರ್ ಹಾಗೂ ವೆಂಕಟರಮಣಪ್ಪ ಎಂಬುವರ ಕುರಿಗಳು ಸಿಡಿಲಿನ ಅಬ್ಬರಕ್ಕೆ ಸಿಲುಕಿ ಸಾವನ್ನಪ್ಪಿವೆ.
ಒಟ್ಟು 15 ಕ್ಕೂ ಹೆಚ್ಚು ಕುರಿ ಹಾಗೂ 6 ಮೇಕೆಗಳು ಅಸುನೀಗಿವೆ. ಅಷ್ಟೇ ಅಲ್ಲದೆ, ರಾಮನಗರ – ಮಾಗಡಿ ರಸ್ತೆ ಬಳಿ ಗಾಳಿಯ ರಭಸಕ್ಕೆ ಅರಳಿಮರ ಬಿದ್ದು 10 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.
ಗುಡುಗು, ಮಿಂಚು, ಬಿರುಗಾಳಿ ಸಹಿತ ಜೋರು ಮಳೆಗೆ ಜನತೆ ತತ್ತರಿಸಿದ್ದಾರೆ. ವರುಣನ ಆರ್ಭಟಕ್ಕೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಹೊಲ, ರಸ್ತೆಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ.








