ಕೆನಡಾದಲ್ಲಿ ಸರ್ದಾರ್ ಪಟೇಲ್ ರ ಪ್ರತಿಮೆ ಉದ್ಘಾಟಿಸಿದ ಪ್ರಧಾನಿ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ (ರವಿವಾರ) ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆ ಉದ್ಘಾಟಿಸಿದರು.
ಕೆನಡಾದ ಒಂಟಾರಿಯೊದಲ್ಲಿರುವ ಸನಾತನ ಮಂದಿರದ ಸಾಂಸ್ಕೃತಿಕ ಕೇಂದ್ರದಲ್ಲಿ ನಿರ್ಮಾಣಗೊಂಡಿರುವ ಸರ್ದಾರ್ ವಲ್ಲಭಾಯಿ ಪಟೇಲ್ ಉದ್ಘಾಟಿಸಿ ಮಾತನಾಡಿದ ಅವರು ಸರ್ದಾರ್ ಪಟೇಲ್ ಅವರ ಪ್ರತಿಮೆಯು ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುವುದಲ್ಲದೆ ಉಭಯ ದೇಶಗಳ ನಡುವಿನ ಸಂಬಂಧದ ಸಂಕೇತವೂ ಆಗಲಿದೆ ಎಂದು ಹೇಳಿದರು.
ಭಾರತೀಯರು ಜಗತ್ತಿನ ಯಾವುದೇ ಮೂಲೆಯಲ್ಲಿ ವಾಸಿಸಿದರೂ ಅವರ ಭಾರತೀಯತೆ ಮತ್ತು ದೇಶದ ಬಗೆಗಿನ ನಿಷ್ಠೆ ಎಂದಿಗೂ ಕಡಿಮೆಯಾಗುವುದಿಲ್ಲ. ಅಲ್ಲದೇ ಭಾರತೀಯರು ತಾವು ವಾಸಿಸುತ್ತಿರುವ ದೇಶಕ್ಕಾಗಿ ಸಂಪೂರ್ಣ ಸಮರ್ಪಣೆ ಮತ್ತು ಸಮಗ್ರತೆಯಿಂದ ಕೆಲಸ ಮಾಡುತ್ತಾರೆ. ಅವರ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಕರ್ತವ್ಯ ಪ್ರಜ್ಞೆಯನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ ಎಂದರು.
ಭಾರತ ಕೇವಲ ರಾಷ್ಟ್ರವಲ್ಲ, ಕಲ್ಪನೆ ಮತ್ತು ಸಂಸ್ಕೃತಿಯೂ ಆಗಿದೆ. ಭಾರತವು ‘ವಸುಧೈವ ಕುಟುಂಬಕಂ’ ಕುರಿತು ಮಾತನಾಡುವ ಉನ್ನತ ಮಟ್ಟದ ಚಿಂತನೆಯಾಗಿದೆ. ಕೆನಡಾ ಅಥವಾ ಇನ್ನಾವುದೇ ದೇಶದಲ್ಲಿರುವ ಸನಾತನ ಮಂದಿರ ಆ ದೇಶದ ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತದೆ ಎಂದು ಹೇಳಿದ್ದಾರೆ.









