ಶೀಘ್ರದಲ್ಲೇ ರಾಜ್ಯ ಸಾರಿಗೆ ನೌಕರರ ವೇತನ ಹೆಚ್ಚಳ !!
ಉತ್ತರ ಕನ್ನಡ: ರಾಜ್ಯ ಸಾರಿಗೆ ಸಚಿವ ಬಿ, ಶ್ರೀರಾಮುಲು ಸಾರಿಗೆ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿದ್ದಾಪುರ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರಿಗೆ ನೌಕರರ ವೇತನ ಪರಿಷ್ಕರಣೆ ಕುರಿತು ಮುಖ್ಯಮಂತ್ರಿ ಜತೆ ಮಾತನಾಡಿದ್ದು, ಶೀಘ್ರದಲ್ಲೇ ವೇತನ ಹೆಚ್ಚಿಸಲಾಗುವುದು. ಹಾಗೇ ಕೆಲವೇ ದಿನಗಳಲ್ಲಿ 4 ಸಾವಿರ ಬಸ್ ಬರಲಿದೆ. ಉತ್ತರ ಕನ್ನಡ ವಿಭಾಗಕ್ಕೂ 150 ಬಸ್ ನೀಡಲಾಗುವುದು ಎಂದರು.
ಅಲ್ಲದೇ ರಾಜ್ಯದ ಎಲ್ಲ ಬಸ್ ನಿಲ್ದಾಣದಲ್ಲಿ ದಿನಪತ್ರಿಕೆ ಮಾರಾಟಕ್ಕೆ ಮಳಿಗೆ ಹಾಗೂ ಕುಳಿತು ಓದಲು ಬೇಕಾದ ರೂಮ್ ವ್ಯವಸ್ಥೆ ಮಾಡಲಾಗುವುದು. ಇನ್ನೂ ಕೊರೊನಾ ಬಂದ ನಂತರ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದ್ದು, ಸಾರಿಗೆ ಸಂಸ್ಥೆ ಲಾಭದಾಯಕ ಮಾಡುವ ಇಚ್ಚಾಶಕ್ತಿ ಯಾರಿಗೂ ಇಲ್ಲ. ಹೀಗಾಗಿ ಸಿದ್ದಾಪುರ ಹಳೆ ಬಸ್ ನಿಲ್ದಾಣದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಕೂಡಲೇ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.
ಹಾಗೇ ಬಿಎಂಟಿಸಿಯಲ್ಲಿ (BMTC) ಹೆಚ್ಚುವರಿ ಇರುವ ಚಾಲಕ, ಕಂಡಕ್ಟರ್‌ಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ವರ್ಗಾಯಿಸುವ ಬಗ್ಗೆ ಪರಿಶೀಲಿಸಲಾಗುವುದು. ಚಾಲಕ ವೃತ್ತಿಯಲ್ಲಿ ಇರುವವರು ಹಲವು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಪ್ರತಿ ತಿಂಗಳೂ ಅವರಿಗೆ ಸಂಬಳ ನೀಡುವ ವ್ಯವಸ್ಥೆ ಮಾಡುತ್ತೇವೆ. ಅವರ ವೇತನ ಪರಿಷ್ಕರಣೆಯನ್ನು ಶೀಘ್ರದಲ್ಲಿ ಮಾಡುತ್ತೇವೆ. ಪ್ರತಿಭಟನೆ ವೇಳೆ ವರ್ಗಾವಣೆಗೊಂಡವರಿಗೆ ಮಾತೃ ಡಿಪೋದಲ್ಲಿ ಕೆಲಸ ಮಾಡುವ ಅವಕಾಶ ಮಾಡಿಕೊಡಲಿದ್ದೇವೆ ಎಂದು ಭರವಸೆ ನೀಡಿದರು.