ಅನ್ಯಗ್ರಹ ಜೀವಿಗಳನ್ನ ಆಕರ್ಷಿಸಲು ಬಾಹ್ಯಕಾಶಕ್ಕೆ ಮಾನವರ ನಗ್ನ ಚಿತ್ರ ರವಾನೆ – ನಾಸಾ
ಅನ್ಯಗ್ರಹ ಜೀವಿಗಳನ್ನು ಆಕರ್ಷಿಸಲು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿಜ್ಞಾನಿಗಳು ವಿಭಿನ್ನ ತಂತ್ರವೊಂದ ಮೊರೆ ಹೋಗಿದ್ದಾರೆ. ಮಾನವರ ನಗ್ನ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ರವಾನಿಸಲು ಮೂಲಕ ಅನ್ಯಗ್ರಹ ಜೀವಿಗಳನ್ನ ಆಕರ್ಷಿಸಲು ನಾಸಾ ಸಿದ್ಧತೆ ನಡೆಸಿದೆ.
‘ಬೀಕನ್ ಇನ್ ದಿ ಗ್ಯಾಲಕ್ಸಿ’ (ಬಿಐಟಿಜಿ) ಎಂಬ ಯೋಜನೆಯ ಅಡಿಯಲ್ಲಿ ವಿಜ್ಞಾನಿಗಳು ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ಗಣಿತ ಶಾಸ್ತ್ರ ಸಂಕೇತಗಳನ್ನು ಆಧರಿಸಿದ ಬೈನರಿ ಕೋಡ್ ಆಧಾರಿತ ಸಂದೇಶಗಳನ್ನು ಇದರೊಂದಿಗೆ ರವಾನೆ ಮಾಡಲಾಗುತ್ತಿದ್ದು, ಪಿಕ್ಸೆಲ್ನ ರೇಖಾಚಿತ್ರದ ಜತೆಯಲ್ಲಿ ಮಾನವರ ಡಿಎನ್ಎ ರಚನೆಗಳ ಚಿತ್ರಣವನ್ನು ಸಹ ಒಳಗೊಂಡಿದೆ. ಇದು ಅನ್ಯಗ್ರಹ ಜೀವಿಗಳಿಗೆ ಮಾನವರ ಕುರಿತಾಗಿ ಸ್ಪಷ್ಟ ಕಲ್ಪನೆಯನ್ನು ಒದಗಿಸುತ್ತದೆ.
ಅನ್ಯಗ್ರಹ ಜೀವಿಗಳು ಬಿಐಟಿಜಿ ಸಂದೇಶಗಳನ್ನು ಸ್ವೀಕರಿಸಿ ನಮ್ಮನ್ನು ಸಂಪರ್ಕಿಸಲು ಯತ್ನಿಸಿದರೆ, ಅವರಿಗೆ ನಮ್ಮ ಸೌರವ್ಯೂಹದ ವಿಳಾಸವನ್ನು ಸಹ ನೀಡಲಾಗಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ವಿಜ್ಞಾನಿಗಳು ಅನ್ಯಗ್ರಹ ಜೀವಿಗಳನ್ನು ಸೆಳೆಯಲು ಮನುಷ್ಯರ ಬೆತ್ತಲೆ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರಯತ್ನ ಮಾಡಿರುವುದು ಇದು ಮೊದಲ ಸಲವೇನಲ್ಲ. 1972ರಲ್ಲಿ ಪಯೋನೀರ್ 10 ಮತ್ತು 1973ರಲ್ಲಿ ಪಯೋನೀರ್ 11 ಯೋಜನೆಗಳಲ್ಲಿ ಎರಡೂ ತಮ್ಮ ಆಂಟೆನಾಗಳಿಗೆ ನಗ್ನ ಮನುಷ್ಯರ ಚಿತ್ರಗಳನ್ನು ಅಳವಡಿಸಲಾಗಿತ್ತು.








