ಕನ್ನಡದ ಹಾಸ್ಯನಟ ಮೋಹನ್ ಜುನೇಜ ವಿಧಿವಶ….
ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ(54) ಇಂದು ವಿಧಿವಶರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದ ತೊಂದರೆಯಿಂದ ಬಳಲುತ್ತಿದ್ದ ಮೋಹನ್ ಜೂನೇಜ ಅವರನ್ನ ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಶನಿವಾರ ಮೇ 7 ರಂದು ಕೊನೆಯುಸಿರೆಳೆದಿದ್ದಾರೆ.
ಇತ್ತೀಚೆಗೆ ರಿಲೀಸ್ ಭರ್ಜರಿ ಯಶಸ್ಸುಗಳಿಸಿದ್ದ ಕೆಜಿಎಫ್ ಭಾಗ 1 ಮತ್ತು 2 ಎರಡರಲ್ಲೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ನವಗ್ರಹ, ಗಣೇಶನ ಗಲಾಟೆ, ಜೋಗಿ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಪತ್ನಿ ಕುಸುಮಾ, ಇಬ್ಬರು ಪುತ್ರರು ಅಕ್ಷಯ್, ಅಶ್ವಿನ್ರನ್ನು ಅಗಲಿದ್ದಾರೆ.
ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಎರಡರಲ್ಲೂ ಸಕ್ರಿಯರಾಗಿದ್ದ ಮೋಹನ್ ಜೂನೇಜ `ವಠಾರ’ ಸೀರಿಯಲ್ನಿಂದ ಜನಪ್ರಿಯತೆ ಗಳಿಸಿದ್ದರು. ಹಲವಾರು ಚಿತ್ರಗಳಲ್ಲಿ ಪೋಷಕ ನಟನಾಗಿ ಮತ್ತು ಹಾಸ್ಯನಟನಾಗಿ ರಂಜಿಸಿದ್ದ ಮೋಹನ್ ಜೂನೇಜ ಅವರಿಗೆ `ಚೆಲ್ಲಾಟ’ ಚಿತ್ರದ ಮಧುಮಗನ ಪಾತ್ರ ತುಂಬಾ ಖ್ಯಾತಿ ತಂದುಕೊಟ್ಟಿತ್ತು..
ಇವರು ಬೆಂಗಳೂರಿನ ಉತ್ತರ ತಾಲ್ಲೂಕಿನ ತಮ್ಮೇನಹಳ್ಳಿಯಲ್ಲಿ ವಾಸಿಸುತ್ತಿದ್ದರು. ಮೃತದೇಹವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಕುಟುಂಬಸ್ಥರು, ಬಂಧುಗಳು, ಕಲಾವಿದರು ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
sandalwood comedy actor mohan juneja is no more