ಸೆಲ್ಫಿ ತೆಗೆದುಕೊಳ್ಳುವಾಗ ನದಿಗೆ ಜಾರಿ ಬಿದ್ದು ಮಹಿಳೆ ಸಾವು….
ಕಾಲು ತೊಳೆಯಲು ನದಿಗೆ ಇಳಿದಿದ್ದ ಮಹಿಳೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ನದಿಗೆ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ. ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸಂಗಮದ ಕಪಿಲಾದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಚಾಮರಾಜನಗರ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದೆ.
ಚಾಮರಾಜನಗರ ಜಿಲ್ಲೆ ನಂಜದೇವನಪುರ ಗ್ರಾಮದ ಗಿರೀಶ್ ಎಂಬುವರ ಪತ್ನಿ 38 ವರ್ಷದ ಕವಿತಾ ಮೃತ ಗೃಹಿಣಿಯಾಗಿದ್ದಾರೆ. ಮೃತ ಗೃಹಿಣಿ ಕವಿತಾ ನಿನ್ನೆ ಅವರ ಪತಿ ಗಿರೀಶ್ ಹಾಗೂ ಪುತ್ರಿಯ ಜೊತೆ ಸಂಗಮ ಕ್ಷೇತ್ರಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು.
ದೇವಾಲಯದ ಪ್ರವೇಶಕ್ಕೂ ಮುನ್ನ ಶ್ರೀಕ್ಷೇತ್ರ ಸಂಗಮದ ಮುಂಭಾಗದಲ್ಲೇ ಕಪಿಲಾ ನದಿ ದಡದಲ್ಲಿ ಕಾಲು ತೊಳೆಯಲು ತೆರಳಿದ್ದಾರೆ. ಕಾಲು ತೊಳೆದು ಬಳಿಕ ಮೊಬೈಲ್ ಪೋನಿನ ಮೂಲಕ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಮೊಬೈಲ್ ಫೋನ್ ಮೂಲಕ ಸೆಲ್ಫಿ ತೆಗೆಯುತ್ತಿದ್ದ ಕವಿತಾ ಕಾಲು ಜಾರಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಕವಿತಾರನ್ನ ಕಳೆದುಕೊಂಡ ಪತಿ ಗಿರೀಶ್ ಮತ್ತು ಅವರ ಪುತ್ರಿಯ ಆಕ್ರಂದನ ಮುಗಿಲುಮುಟ್ಟಿದೆ. ಮೃತ ದೇಹವನ್ನು ನದಿಯಿಂದ ಹೊರತೆಗೆದು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.