ರಾಜ್ಯದಲ್ಲಿ 1000 ಕ್ಕೂ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೆಂದ್ರ ಸ್ಥಾಪನೆ – ಸಚಿವ ಸುನೀಲ್ ಕುಮಾರ್
ಕರ್ನಾಟಕದಲ್ಲಿ ಹೆಚ್ಚುವರಿಯಾಗಿ 1000 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರಗಳನ್ನು (1000 EV Charging Unit) ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಚಾರ್ಜಿಂಗ್ ಘಟಕಗಳ ಕೊರತೆಯಿಂದಾಗಿ ಸವಾರರು ಖರೀದಿಗೆ ಮುಂದಾಗುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಎಂಜಿನಿಯರ್ಸ್ ಅಸೋಸಿಯೇಷನ್ (ಕೆಬಿಇಎ) ತರಬೇತಿ ಸಂಸ್ಥೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಸೆಸ್ಕ್) ಆಯೋಜಿಸಿದ್ದ ‘ಇವಿ ಮತ್ತು ಅದರ ಚಾರ್ಜಿಂಗ್ ತಂತ್ರಜ್ಞಾನಗಳು’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೂನ್ ಅಂತ್ಯದ ವೇಳೆಗೆ ರಾಜ್ಯಕ್ಕೆ ಹೆಚ್ಚುವರಿ 1000 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು ಇವಿ ಗಳನ್ನು ಉತ್ತೇಜಿಸಲು ವಿಶೇಷ ಡ್ರೈವ್ ನಡೆಸಲಾಗುತ್ತದೆ. ಅಲ್ಲದೇ ಚಾರ್ಜಿಂಗ್ ಘಟಕಗಳನ್ನು ಜಿಲ್ಲಾ ಕೇಂದ್ರಗಳು, ಪ್ರವಾಸಿ ಸ್ಥಳಗಳು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಥಾಪಿಸಲಾಗುವುದು ಎಂದಿದ್ದಾರೆ.
ಇನ್ನು ಚಾರ್ಜಿಂಗ್ ಘಟಕಗಳನ್ನು ಸ್ಥಾಪನೆಗೆ ಅಗತ್ಯವಿರುವ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಲು ಸ್ಥಳಾವಕಾಶ ಒದಗಿಸುವಂತೆ ಈಗಾಗಲೇ ಸರಕಾರಿ ಕಚೇರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸುನೀಲ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.








