ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿದ ರಾಜ್ಯ ಸರ್ಕಾರ
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ಮಧ್ಯಾಹ್ನ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
2021ರ ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿಯೇ ಈ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿತ್ತು. ಆದರೆ ಪರಿಷತ್ ನಲ್ಲಿ ಬಹುಮತ ಇಲ್ಲದ್ದಕ್ಕೆ ಕಾಯ್ದೆ ಮಂಡನೆಯನ್ನು ಸರ್ಕಾರ ಮುಂದೂಡಿತ್ತು.
ಈ ಬಾರಿ ಬಜೆಟ್ ಅಧೀವೇಶದಲ್ಲಿ ಕೂಡ ಸರ್ಕಾರ ಕಾಯ್ದೆ ಮಂಡನೆ ಮಾಡಲಿಲ್ಲ. ಅಗತ್ಯಕ್ಕಿಂತ ಬಹುಮತ ಕಡಿಮೆ ಇದ್ದದ್ದರಿಂದ ಮಂಡನೆಯನ್ನ ಕೈಬಿಟ್ಟಿತ್ತು. ಆದರೆ ಇದೀಗ ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರ ಇಂದು ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಆಧ್ಯಾದೇಶ 2022 ಇದಕ್ಕೆ ಅನುಮೋದನೆ ನೀಡಿದೆ.
ಸಂಪುಟ ನಿರ್ಣಯ ಕೈಗೊಂಡ ನಂತರ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗುತ್ತದೆ. ರಾಜ್ಯಪಾಲರು ಅಂಕಿತ ಹಾಕುತ್ತಿದ್ದಂತೆ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬರಲಿದೆ.








