Jadeja | ಟೂರ್ನಿಯಿಂದ ಜಡ್ಡು ಔಟ್… ಸಿಎಸ್ ಕೆ ಫಾಂಚೈಸಿ ಬಗ್ಗೆ ಅನುಮಾನ
CSK ಮಾಜಿ ನಾಯಕ ರವೀಂದ್ರ ಜಡೇಜಾ ಅವರು ಗಾಯದ ಕಾರಣ IPL 2022 ರ ಸೀಸನ್‌ನಿಂದ ಹೊರಗುಳಿದಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಜಡ್ಡು ಗಾಯಗೊಂಡಿದ್ದಾರೆ ಎಂದು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ವಿವರಣೆ ನೀಡಿದ್ದರೂ, ಅಭಿಮಾನಿಗಳಲ್ಲಿ ವಿವಿಧ ಅನುಮಾನಗಳು ಮನೆ ಮಾಡಿವೆ. ಇದರ ಬೆನ್ನಲ್ಲೆ ಜಡೇಜಾ-ಸಿಎಸ್‌ಕೆ ಬಗ್ಗೆ ಆಕಾಶ್ ಚೋಪ್ರಾ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ರವೀಂದ್ರ ಜಡೇಜಾ ಮುಂದಿನ ಸೀಸನ್ ನಲ್ಲಿ ಸಿಎಸ್ ಕೆ ತಂಡದಲ್ಲಿ ಇಲ್ಲದೇ ಇರಬಹುದು ಎಂದಿದ್ದಾರೆ. ಅಲ್ಲದೇ ಸಿಎಸ್ ಕೆ ಫ್ರಾಂಚೈಸಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜಡೇಜಾ ವಿರುದ್ಧವಾಗಿ ತಂಡದಲ್ಲಿ ಷಡ್ಯಂತ್ರಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಸಿಎಸ್‌ಕೆ ಮಾಲೀಕತ್ವವು ಕಳೆದ ಋತುವಿನಲ್ಲಿ ಸುರೇಶ್ ರೈನಾ ಅವರ ವಿಷಯದಲ್ಲಿ ಮಾಡಿದಂತೆಯೇ ಜಡೇಜಾ ವಿಷಯದಲ್ಲಿಯೂ ಪುನರಾವರ್ತಿಸುತ್ತದೆ ಎಂದು ಚೋಪ್ರಾ ಆತಂಕ ವ್ಯಕ್ತಪಡಿಸಿದರು.
ರವೀಂದ್ರ ಜಡೇಜಾ ಮೇ ನಾಲ್ಕರಂದು ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು. ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ಡೈವ್ ಹೊಡೆದು ಜಡೇಜಾ ಪಕ್ಕೆಲುಬಿಗೆ ಗಾಯ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಜಡೇಜಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.ಈಗ ಗಾಯ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಡೇಜಾಗೆ ವಿಶ್ರಾಂತಿ ಅತ್ಯವಶ್ಯಕ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ರವೀಂದ್ರ ಜಡೇಜಾ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಅಂದಹಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 15ನೇ ಆವೃತ್ತಿಯ ಐಪಿಎಲ್ನಲ್ಲಿ ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ. ಮೊದಲಿಗೆ ರವೀಂದ್ರ ಜಡೇಜಾ ನಾಯಕನಾಗಿ ಯಶಸ್ಸು ಕಾಣಲಿಲ್ಲ. ಬಳಿಕ ಮಹೇಂದ್ರ ಸಿಂಗ್ ಧೋನಿ ಕೈಗೆ ನಾಯಕತ್ವ ಮರಳಿದರೂ ಗೆಲುವಿನ ಸ್ಥಿರತೆ ಕಂಡುಕೊಳ್ಳಲಿಲ್ಲ. ಇಲ್ಲಿ ತನಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು 11 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 7 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮೊದಲ ಎಂಟು ಪಂದ್ಯಗಳಿಗೆ ರವೀಂದ್ರ ಜಡೇಜಾ ನಾಯಕರಾಗಿದ್ದರು. ಈ ವೇಳೆ ಚೆನ್ನೈ ತಂಡ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿತ್ತು. ಹೀಗಾಗಿ ಸ್ವತಃ ರವೀಂದ್ರ ಜಡೇಜಾ ಅವರೇ ನಾಯಕತ್ವದಿಂದ ಕೆಳಗಿಳಿದರು. ಬಳಿಕ ಮತ್ತೆ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸಾರಥ್ಯವಹಿಸಿಕೊಂಡರು. ಚೆನ್ನೈ ಸೂಪರ್ ಕಿಂಗ್ಸ್ ಲೀಗ್ನಲ್ಲಿ ಇನ್ನು ಮೂರು ಪಂದ್ಯಗಳನ್ನು ಆಡಬೇಕಿದೆ. ಲೀಗ್ ಹಂತದಲ್ಲಿ ಚೆನ್ನೈ ತಂಡ, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಗಳನ್ನು ಆಡಬೇಕಿದೆ. ipl 2022 jadeja-may-not-be-csk-camp-next-year