PBKS vs DC Match | ಪಂಜಾಬ್ ವಿರುದ್ಧ ಗೆದ್ದು ನಾಲ್ಕನೇ ಸ್ಥಾನಕ್ಕೇರಿದ ಡೆಲ್ಲಿ
ಮಹತ್ವದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ 17 ರನ್ ಗಳಿಂದ ಗೆಲುವು ಸಾಧಿಸುವ ಮೂಲಕ 15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ ಪ್ಲೇ ಆಫ್ಸ್ ಗೆ ಮತ್ತಷ್ಟು ಹತ್ತಿರವಾಗಿದೆ.
ಇತ್ತ ಈ ಪಂದ್ಯದ ಸೋಲಿನೊಂದಿಗೆ ಪಂಜಾಬ್ ತಂಡದ ಪ್ಲೇ ಆಫ್ಸ್ ಕನಸು ನನಸಾಗೋದು ಅನುಮಾನವಾಗಿದೆ.
ಡಿ ವೈ ಪಾಟೀಲ್ ಅಂಗಳದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಟಾಸ್ ಸೋತರೂ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಿಚೆಲ್ ಮಾರ್ಷ್ (63 ರನ್) ಮತ್ತು ಸರ್ಫರಾಜ್ ಖಾನ್ (32 ರನ್) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169ರನ್ ಕಲೆಹಾಕಿತು.
ಪಂಜಾಬ್ ಪರ ಲಿವಿಂಗ್ ಸ್ಟೋನ್ ಮತ್ತು ಅರ್ಷದೀಪ್ ಸಿಂಗ್ ತಲಾ 3 ವಿಕೆಟ್ ಕಬಳಿಸಿದರೆ, ರಬಾಡಾ 1 ವಿಕೆಟ್ ಕಬಳಿಸಿದರು.
ಡೆಲ್ಲಿ ನೀಡಿದ 170ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ ಉತ್ತಮ ಆರಂಭ ಪಡೆಯಿತು. ಆದ್ರೆ ಅದನ್ನ ಬಳಸಿಕೊಳ್ಳುವಲ್ಲಿ ಪಂಜಾಬ್ ನ ಮಿಡಲ್ ಆರ್ಡರ್ ವಿಫಲವಾಯ್ತು.
ಆರಂಭಿಕರಾದ ಜಾನಿ ಬೇರ್ ಸ್ಟೋ 28ರನ್ ಮತ್ತು ಶಿಖರ್ ಧವನ್ 19 ರನ್ ಗಳಿಸಿ ನಿರ್ಗಮಿಸಿದರು.
ಇದಾದ ಬಳಿಕ ಪಂಜಾಬ್ ತಂಡದ ಮಧ್ಯಮ ಕ್ರಮಾಂಕ ಪೆವಿಲಿಯನ್ ಪರೇಡ್ ನಡೆಸಿದರು.
ಭರವಸೆಯ ಆಟಗಾರರಾದ ರಾಜಪಕ್ಸ 4ರನ್, ಲಿವಿಂಗ್ ಸ್ಟೋನ್ 3 ರನ್ ಮತ್ತು ಮಯಾಂಕ್ ಅಗರ್ವಾಲ್ ಶೂನ್ಯ ಸುತ್ತಿದರು. ಈ ಹಂತದಲ್ಲಿ ಡೆಲ್ಲಿ ಬೌಲರ್ ಗಳು ಮೇಲುಗೈ ಸಾಧಿಸಿದರು.
ಈ ಸಂಕಷ್ಟದ ಸ್ಥಿತಿಯಲ್ಲಿ ಪಂಜಾಬ್ ಗೆ ವಿಕೆಟ್ ಕೀಪರ್ ಜಿತೇಶ್ ಶರ್ಮಾ 44 ರನ್ ಸಿಡಿಸಿ ಆಸರೆಯಾಗಿ ನಿಂತರು, ಆದರೂ ಅವರಿಗೆ ಇತರೆ ಆಟಗಾರರಿಂದ ಸಾಥ್ ದೊರೆಯಲಿಲ್ಲ.
ಕೆಳಕ್ರಮಾಂಕದ ಆಟಗಾರರಾದ ಬ್ರಾರ್ 1 ರನ್ ಗಳಿಸಿ ಔಟಾದರೆ, ರಿಷಿ ಧವನ್ 4ರನ್ ಗಳಿಸಿದರು.
ಕಾಗಿಸೋ ರಬಾಡಾ 6ರನ್ ಗಳಿಸಿದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 17ರನ್ ಗಳ ಅಂತರದಲ್ಲಿ ಸೋಲು ಅನುಭವಿಸಿತು.
ಡೆಲ್ಲಿ ಪರ ಶಾರ್ದೂಲ್ ಠಾಕೂರ್ 4 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಅತ್ತ ಡೆಲ್ಲಿ ಜಯದಿಂದಾಗಿ ನಾಲ್ಕನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದನೇ ಸ್ಥಾನಕ್ಕೆ ತಳ್ಳಿದೆ.
pbks-vs-dc-match-delhi capitals beat punjab kings