ಬೆಂಗಳೂರು : ಬಿ.ಎಸ್ ಯಡಿಯೂರಪ್ಪ, ರಾಜ್ಯ ಕೇಸರಿ ಪಡೆಯ ರಾಜಾಹುಲಿ. ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕಮಲವನ್ನು ಅರಳಿಸಿದ ಛಲದಂಕಮಲ್ಲ. ರೈತ ಹೋರಾಟದಿಂದ ಸಿಎಂ ಕುರ್ಚಿಯವರೆಗೆ ಬಿಎಸ್ ವೈ ನಡೆದು ಬಂದ ಹಾದಿ ಒಂದು ಇತಿಹಾಸ. ರಾಜ್ಯ ಭಾಜಪಾ ಮಟ್ಟಿಗೆ ಯಡಿಯೂರಪ್ಪ ಒಂಟಿ ಸಲಗ. ಒಂದೇ ಮಾತಿನಲ್ಲೇ ಹೇಳಬೇಕಾದರೇ ಇಂದು ರಾಜ್ಯದಲ್ಲಿ ಕೇಸರಿ ಬಾವುಟ ಹಾರಾಡುತ್ತಿದೆ ಎಂದರೇ ಅದಕ್ಕೆ ಮೂಲ ಕಾರಣ ಒನ್ ಅಂಡ್ ಓನ್ಲಿ ಬಿ.ಎಸ್ ಯಡಿಯೂರಪ್ಪ.
ಆದ್ರೆ ಬದಲಾದ ರಾಜಕೀಯ ಬೆಳವಣಿಗಳಲ್ಲಿ ಯಡಿಯೂರಪ್ಪನವರಿಗೆ ತಮ್ಮ ಪಕ್ಷದವರೇ ಚೆಕ್ ಮೇಟ್ ಇಟ್ಟಿದ್ದಾರೆ. ಹೌದು..! ನಾಲ್ಕನೇ ಬಾರಿ ಸಿಎಂ ಸ್ಥಾನದಲ್ಲಿ ಕೂತಿರುವ ಬಿಎಸ್ ವೈಗೆ ತ್ರಿಕಂಟಕ ಎದುರಾಗಿದೆ.
ಸದ್ಯ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಮೂವರು ನಾಯಕರು ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಂಚು ರೂಪಿಸಿದ್ದಾರೆ ಅನ್ನೋ ಮಾಹಿತಿ ರಾಜಕೀಯ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ.
ಕೊರೊನಾ ಮಧ್ಯೆ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗದರಿದ್ದು, ಉತ್ತರ ಕರ್ನಾಟಕ ಭಾಗದ ಕಮಲ ನಾಯಕರೇ ಸಿಎಂಗೆ ಮುಳುವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಉತ್ತರ ಕರ್ನಾಟಕ ಪ್ರಭಾವಿ ನಾಯಕರಾದ ಉಮೇಶ್ ಕತ್ತಿ, ಮುರಗೇಶ್ ನಿರಾಣಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ಚಕ್ರವ್ಯೂಹ ರಚಿಸಿದ್ದಾರೆ. ಈ ಮೂವರ ನಾಯಕತ್ವದಲ್ಲಿ ಕಳೆದ ಕೆಲ ದಿನಗಳಿಂದ ಸರಣಿ ಸಭೆಗಳು ನಡೆಯುತ್ತಿದ್ದು, ಸಿಎಂ ವಿರುದ್ಧದ ಆಪರೇಷನ್ ವೇದಿಕೆಯನ್ನು ಸಿದ್ಧಗೊಳಿಸಿದ್ದಾರೆ ಎನ್ನಲಾಗಿದೆ.
ಬಿಎಸ್ ವೈ ಟಾರ್ಗೆಟ್ ಯಾಕೆ?
ಉತ್ತರ ಕರ್ನಾಟಕದ ಉಮೇಶ್ ಕತ್ತಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮೊದಲಿನಿಂದಲೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಆದ್ರೆ ಮೈತ್ರಿ ಬಿಟ್ಟು ಕಮಲ ಹಿಡಿದ ಶಾಸಕರಿಗಾಗಿ ಸಿಎಂ ಬಿಎಸ್ ವೈ ಇವರನ್ನು ಕಡೆಗಣಿಸಿದ್ದು, ಇದುವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ಕಾರಣಕ್ಕಾಗಿ ಇದೀಗ ಉಮೇಶ್ ಕತ್ತಿ ಮತ್ತು ಯತ್ನಾಳ್ ಇಬ್ಬರು ನಿರಾಣಿಯ ಬೆಂಬಲದೊಂದಿಗೆ ಬಿಎಸ್ ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಚಕ್ರವ್ಯೂಹದಲ್ಲಿ ರಾಜಾಹುಲಿ
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಯಡಿಯೂರಪ್ಪ ಅವರಿಗೆ ಬ್ಯಾಕ್ ಟು ಬ್ಯಾಕ್ ಹೊಡೆತಗಳು ಬೀಳುತ್ತಿವೆ. ಮೊದಲು ಜಿದ್ದಿಗೆ ಬಿದ್ದು ಸರ್ಕಾರ ರಚಿಸಿ ಪ್ರಮಾಣ ವಚನ ಸ್ವೀಕರಿಸಿದ ಬಿಎಸ್ ವೈಗೆ ಸಂಪುಟ ಸಂಕಷ್ಟ ಎದುರಾಯ್ತು. ಬಳಿಕ ನೆರೆ ಹಾವಳಿ ಯಡಿಯೂರಪ್ಪ ಅವರ ನಿದ್ದೆಗೆಡಿಸ್ತು. ಇದರ ನಡುವೆ ಬೈ ಎಲೆಕ್ಷನ್ ಅಗ್ನಿಪರೀಕ್ಷೆ ಎದುರಿಸಿದ ಸಿಎಂಗೆ, ಸಂಪುಟ ರಚನೆ ಬಳಿಕ ಖಾತೆ ಹಂಚಿಕೆ ಕಂಟಕ ಎದುರಾಯ್ತು. ಬಳಿಕ ಸಂಪುಟ ವಿಸ್ತರಣೆಗೆ ಕೈ ಹಾಕಿ ಮೂಲ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾದರು. ಎಲ್ಲಾ ಸರಿಹೋಯ್ತು ಎನ್ನುವಷ್ಟರಲ್ಲಿ ಸಿಎಂ ಬಿಎಸ್ ವೈಗೆ ಕೊರೊನಾ ಶನಿಯಂತೆ ವಕ್ಕರಿಸಿದೆ. ಸದ್ಯ ಕೊರೊನಾ ನಿಯಂತ್ರಣಕ್ಕೆ ಹಗಲು ರಾತ್ರಿ ಕೆಲಸ ಮಾಡುತ್ತಿರುವ ರಾಜಾಹುಲಿಗೆ ಇದೀಗ ಶಾಸಕರ ಭಿನ್ನಮತ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಹೇಶ್ ಎಂ ದಂಡು








