ಲಾಲು ಪ್ರಸಾದ ಕುಟುಂಬದ ಮೇಲೆ CBI ದಾಳಿ – ರೈಲ್ವೆ ಉದ್ಯೋಗಕ್ಕೆ ಬದಲಾಗಿ ಭೂಮಿ ಪಡೆದ ಆರೋಪ
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದವರ ಮೇಲೆ ಪಾಟ್ನಾ ಮತ್ತು ದೆಹಲಿ ಸೇರಿದಂತೆ 17 ಸ್ಥಳಗಳಲ್ಲಿ ಸಿಬಿಐ ದಾಳಿ ಮಾಡಿದೆ. ರೈಲ್ವೇ ನೇಮಕಾತಿ ಮಂಡಳಿಯಲ್ಲಿ ಅವ್ಯವಹಾರ ನಡೆದಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಲಾಲು ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಮಗಳು ಮಿಸಾ ಭಾರ್ತಿ ಅವರಿಗೆ ಸೇರಿದ ಪಾಟ್ನಾ, ಗೋಪಾಲ್‌ಗಂಜ್ ಮತ್ತು ದೆಹಲಿಯ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ.
ಇಲ್ಲಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕಾರ್ಯಕರ್ತರು ಸಿಬಿಐ ಕ್ರಮದ ವಿರುದ್ಧ ಪಾಟ್ನಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿ ಆರ್‌ಜೆಡಿ ಕಾರ್ಯಕರ್ತರು ಧರಣಿ ಮತ್ತು ಪ್ರತಿಭಟನೆ ಆರಂಭಿಸಿದ್ದಾರೆ. ದಾಳಿ ವೇಳೆ ಅಧಿಕಾರಿಗಳು ಲಾಲು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಅವರನ್ನು ಮರದ ಕೆಳಗೆ ಕೂರಿಸಿದ್ದಾರೆ.
ಉದ್ಯೋಗಕ್ಕೆ ಬದಲಾಗಿ ಭೂಮಿ ಪಡೆದುಕೊಂಡ ಆರೋಪ
ಈ ದಾಳಿ ರೈಲ್ವೆ ನೇಮಕಾತಿ ಹಗರಣಕ್ಕೆ ಸಂಬಂಧಿಸಿದೆ. 2004 ರಿಂದ 2009 ರ ನಡುವೆ ಲಾಲು ಅವರು ರೈಲ್ವೆ ಸಚಿವರಾಗಿದ್ದಾಗ ಉದ್ಯೋಗಕ್ಕೆ ಬದಲಾಗಿ ಭೂಮಿ ಮತ್ತು ನಿವೇಶನಗಳನ್ನ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಪ್ರಕರಣದ ತನಿಖೆಯ ನಂತರ ಸಿಬಿಐ ಲಾಲು ಮತ್ತು ಅವರ ಪುತ್ರಿಯ ವಿರುದ್ಧ ಹೊಸ ಪ್ರಕರಣ ದಾಖಲಿಸಿದೆ.