ಬಿಡುಗಡೆಗೆ ಸಜ್ಜಾದ ‘ವಾಸಂತಿ ನಲಿದಾಗ’ ಸಿನಿಮಾ..
ಜೇನುಗೂಡ ಸಿನಿಮಾ ಬ್ಯಾನರ್ ನಡಿ ಕೆ.ಎನ್ ಶ್ರೀಧರ್ ನಿರ್ಮಾಣ ಮಾಡಿರುವ ‘ವಾಸಂತಿ ನಲಿದಾಗ ಸಿನಿಮಾ’ದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಹಿಂದೆ ಪುಟಾಣಿ ಸಫಾರಿ, ವರ್ಣಮಯ ಸಿನಿಮಾ ನಿರ್ದೇಶನ ಮಾಡಿದ್ದ ರವೀಂದ್ರ ವಂಶಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಯುವ ಪ್ರತಿಭೆಗಳಾದ ರೋಹಿತ್ ಶ್ರೀಧರ್ ನಾಯಕನಾಗಿ ಹಾಗೂ ಭಾವನಾ ಶ್ರೀನಿವಾಸ್ ನಾಯಕಿಯಾಗಿ ನಟಿಸಿದ್ದು, ಜೀವಿತ ವಸಿಷ್ಠ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ಸಿನಿಮಾದಲ್ಲಿದ್ದಾರೆ.
ನಿಜವಾಗಲೂ ಸಂತೋಷವಾಗುತ್ತಿದೆ. ಸುಧಾರಾಣಿ ನನ್ನ ಮೊದಲ ಜೋಡಿ. ಈ ಸಿನಿಮಾದಲ್ಲೂ ಮತ್ತೆ ಜೋಡಿಯಾಗಿ ನಟಿಸುತ್ತಿದ್ದೇವೆ. ನಾನು ಬ್ಯುಸಿನೆಸ್ ಮ್ಯಾನ್. ಮಗ ಅಂದ್ರೆ ಇಷ್ಟ. ತುಂಬಾ ಇಂಟ್ರೆಸ್ಟಿಂಗ್ ಇರುವ ಪಾತ್ರ. ವಾಸಂತಿ ನಲಿದಾಗ ತುಂಬಾ ಸುಂದರವಾದ ಟೈಟಲ್, ವಂಡರ್ ಫುಲ್ ಸ್ಟಾರ್ ಕಾಸ್ಟ್, ಟೆಕ್ನಿಷಿಯನ್ ಎಂದು ಸಾಯಿಕುಮಾರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.
ಮಂಜು ಪಾವಗಡ ಮಾತನಾಡಿ, ರವೀಂದ್ರ ಸರ್ ಗೆ ಧನ್ಯವಾದ ಒಳ್ಳೆ ಪಾತ್ರ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಅದ್ಭುತ ಸನ್ನಿವೇಶಗಳಿವೆ. ಡೈಲಾಗ್ ತುಂಬಾ ಚೆನ್ನಾಗಿವೆ. ಇಷ್ಟೆಲ್ಲಾ ಸೀನ್ ಮಾಡಿದ್ರೂ ಹೀರೋಯಿನ್ ಕಾಣಿಸಿಲ್ಲ. ಆಮೇಲೆ ನಂಬರ್ ಕೊಟ್ರೆ ಕಷ್ಟಸುಖ ಮಾತಾಡೋಣಾ ಎಂದು ತಮಾಷೆ ಮಾಡಿದರು.
ರೋಮ್ಯಾಂಟಿಕ್ ಕಥಾಹಂದರ ಹೊಂದಿರುವ ವಾಸಂತಿ ನಲಿದಾಗ ಸಿನಿಮಾಗೆ ಶ್ರೀಗುರು ಸಂಗೀತವಿದ್ದು, ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ. ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣ ಸಿನಿಮಾಕ್ಕಿದ್ದು, ಸದ್ಯದಲ್ಲಿಯೇ ಸಿನಿಮಾ ಥಿಯೇಟರ್ ಗೆ ಎಂಟ್ರಿ ಕೊಡಲಿದೆ.