ಮೈಸೂರು : ಶಾಸಕ ಉಮೇಶ್ ಕತ್ತಿ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಿಕಿಹೊಳಿ ಹೇಳಿದ್ದಾರೆ. ಬಿಜೆಪಿಯ ಕೆಲ ಶಾಸಕರಿಂದ ರಹಸ್ಯ ಸಭೆ ವಿಚಾರದ ಬಗ್ಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊರೊನಾ ಲಾಕ್ ಡೌನ್ ಕಾರಣದಿಂದ ಯಾರೂ ಪರಸ್ಪರ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಹಳ ದಿನಗಳ ನಂತರ ಎಲ್ಲರೂ ಕೂಡಿದ್ದಾರೆ. ಒಂದು ಕಡೆ ಕುಳಿತು ಊಟ ಮಾಡಿದ್ದಾರೆ. ಅದನ್ನೇ ಮಾಧ್ಯಮಗಳು ತಪ್ಪಾಗಿ ಅರ್ಥೈಸುತ್ತಿವೆ. ಸಭೆ ಸೇರಿದ ಮಾತ್ರಕ್ಕೆ ಏನೇನೋ ಆಗಿ ಬಿಡುವುದಿಲ್ಲ ಎಂದು ಗುಡುಗಿದರು.
ಇನ್ನು ಉಮೇಶ್ ಕತ್ತಿ ನನ್ನ ಸ್ನೇಹಿತ. ಆತ ಏನೇನೋ ಆಡ್ತಾನೆ, ಆದ್ರೆ ಪಕ್ಷ ಬಿಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಇದೇ ವೇಳೆ ರಾಜ್ಯಸಭೆ, ವಿಧಾನ ಪರಿಷತ್ ಸದಸ್ಯತ್ವ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಪಕ್ಷದ ಹೈಕಮಾಂಡ್ ಇದೆ. ಎಲ್ಲವನ್ನೂ ಅವರೇ ತೀರ್ಮಾನ ಮಾಡುತ್ತಾರೆ. ಹೆಚ್.ವಿಶ್ವನಾಥ್ ಆಯ್ಕೆಯ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು, ವಿಶ್ವನಾಥ್ ಇಬ್ಬರೂ ನಿನ್ನೆ ಸಂಸದ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿದ್ದೆವು. ಅವರು ಹಿರಿಯರು, ಅವರ ಬಗ್ಗೆ ಅಪಾರ ಗೌರವವಿದೆ. ನನಗೆ ಯೂಥ್ ಕಾಂಗ್ರೆಸ್ ಕೋಟಾದಡಿ ಮೊದಲು ಟಿಕೆಟ್ ಕೊಟ್ಟಿದ್ದೇ ಪ್ರಸಾದ್. ನನ್ನ ರಾಜಕೀಯ ಪ್ರವೇಶಕ್ಕೆ ಅವರು ಕಾರಣಕರ್ತರು. ಆದ್ದರಿಂದ ಭೇಟಿ ಮಾಡಿ ಮಾತನಾಡಿದ್ದೇನೆ. ಅದರ ಹೊರತು ಬೇರೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.








