ಹೊಸದಿಲ್ಲಿ, ಮೇ 29 : ಫೇಸ್ ಬುಕ್ ನ ಆಂತರಿಕ ಸಂಶೋಧನೆ ಮತ್ತು ಅಭಿವೃದ್ಧಿ ತಂಡ ಕ್ಯಾಚ್ ಅಪ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಆ್ಯಪ್ ನಲ್ಲಿ ಬಳಕೆದಾರರು ತಮ್ಮ ಬಂಧು – ಮಿತ್ರರೂ ಸೇರಿದಂತೆ ಏಕಕಾಲಕ್ಕೆ ಒಟ್ಟು 8 ಜನರನ್ನು ಗ್ರೂಪ್ ಕರೆ ಮೂಲಕ ಸಂಪರ್ಕ ಸಾಧಿಸಬಹುದಾಗಿದ್ದು, ಸದ್ಯಕ್ಕೆ ಇದು ಅಮೆರಿಕದ ಬಳಕೆದಾರರಿಗೆ ಮಾತ್ರ ಲಭ್ಯವಾಗಿದೆ.
ಅನೇಕ ಗ್ರೂಪ್ ಚಾಟ್ ಆ್ಯಪ್ ಗಳಿಗಿಂತ ಕ್ಯಾಚ್ ಅಪ್ ಆ್ಯಪ್ ಭಿನ್ನವಾಗಿದ್ದು, ಇದು ನಿಮ್ಮ ಬಂಧು-ಮಿತ್ರರು ಚಾಟ್ ಮಾಡಲು ಸಿದ್ಧರಿದ್ದರೆ ನಿಮಗೆ ಸೂಚನೆಯನ್ನು ಕೊಡುತ್ತದೆ.
ಕ್ಯಾಚ್ ಅಪ್ ಆ್ಯಪ್ ಬಳಸಲು ಫೇಸ್ ಬುಕ್ ಖಾತೆ ಹೊಂದಿರಬೇಕಾದ ಅವಶ್ಯಕತೆ ಇಲ್ಲವಾಗಿದ್ದು, ಫೋನ್ ಗಳ ಸಂಪರ್ಕಗಳ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ. ಅಷ್ಟೇ ಅಲ್ಲ ಕ್ಯಾಚ್ ಅಪ್ ಆ್ಯಪ್, ಆಪ್ ಹೌಸ್ ಪಾರ್ಟಿ ಅಪ್ಲಿಕೇಶನ್ ಗೆ ಹೋಲುವ ವೈಶಿಷ್ಟ್ಯಹೊಂದಿದ್ದು, ಬಳಕೆದಾರರು ಆ್ಯಪ್ ನಲ್ಲಿ ಸ್ಟೇಟಸ್ ಹಾಕುವ ಮೂಲಕ ನಾವು ಚಾಟ್ ಗೆ ಸಿದ್ಧರಾಗಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಬಹುದಾಗಿದೆ. ಪರದೆಯ ಮೇಲ್ಬಾಗದಲ್ಲಿ ರೆಡಿ ಫಾರ್ ಚಾಟ್ ಡಿಸ್ಪ್ಲೇ ಮಾಡಬಹುದಾಗಿದ್ದು, ಕೆಳಗಡೆ ಆಫ್ ಲೈನ್ ಬಳಕೆದಾರರ ಮತ್ತು ಇತರ ಸಂಪರ್ಕಗಳನ್ನು ನೀಡಲಾಗಿದೆ.
ಒಬ್ಬ ಬಳಕೆದಾರ ಬೇರೆ ಬಳಕೆದಾರರು ಮಾತನಾಡಲು ಫ್ರೀ ಆಗಿರುವರೋ ಇಲ್ಲವೋ ಎಂದು ತಿಳಿದು ಮಾತುಕತೆ ನಡೆಸಲು ಈ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದ್ದು, ಉತ್ತರಿಸಲಾಗದ ಸಂದರ್ಭದಲ್ಲಿ ವಾಯ್ಸ್ ಮೇಲ್ ರೂಪದಲ್ಲಿ ಸಹ ವಿಷಯವನ್ನು ತಿಳಿಸಬಹುದಾಗಿದೆ. ಇತರ ಚಾಟ್ ಆ್ಯಪ್ ಗಳಂತೆ ಇದರಲ್ಲಿಯೂ ಸಹ ಸ್ನೇಹಿತರ, ಕುಟುಂಬಸ್ಥರ ಹಾಗೂ ಸಹಪಾಠಿಗಳ ಸಂಪರ್ಕಗಳ ಗ್ರೂಪ್ ತಯಾರಿಸಬಹುದಾಗಿದೆ.








