ಮಿಥಾಲಿ ರಾಜ್ – ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಮಹಿಳಾ ಕ್ರಿಕೆಟ್ ತಂಡದ ನಾಯಕಿ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೆ ವಿದಾಯ ಘೋಷಿಸಿದ್ದಾರೆ. ಟ್ವೀಟ್ ಮೂಲಕ ಈ ಮಾಹಿತಿ ನೀಡಿರುವ ಮಿಥಾಲಿ ರಾಜ್ ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ಹೇಳಿದ್ದಾರೆ. ತನ್ನ ಎರಡನೇ ಇನ್ನಿಂಗ್ಸ್‌ನತ್ತ ಗಮನ ಹರಿಸುವುದಾಗಿ ಬರೆದುಕೊಂಡಿದ್ದಾರೆ. ಆದರೆ, ಈ ಎರಡನೇ ಇನ್ನಿಂಗ್ಸ್ ಏನೆಂಬುದನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ.
23 ವರ್ಷಗಳ ವೃತ್ತಿಜೀವನಕ್ಕೆ ವಿದಾಯ
ಮಿಥಾಲಿ ರಾಜ್ 26 ಜೂನ್ 1999 ರಂದು ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಕಳೆದ 23 ವರ್ಷಗಳಿಂದ ಭಾರತ ತಂಡದಲ್ಲಿ ಆಡುತ್ತಿದ್ದರು. 39ರ ಹರೆಯದ ಮಿಥಾಲಿ ಟೀಂ ಇಂಡಿಯಾ ಪರ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರು 2000 ರಲ್ಲಿ ಭಾರತಕ್ಕಾಗಿ ಮೊದಲ ವಿಶ್ವಕಪ್ ಆಡಿದರು. ಇದಾದ ಬಳಿಕ 2005, 2009, 2013, 2017 ಮತ್ತು 2022ರಲ್ಲಿ ಟೀಂ ಇಂಡಿಯಾ ಪರ ಮೈದಾನಕ್ಕಿಳಿದಿದ್ದರು.
ಮಿಥಾಲಿ ರಾಜ್ ಹೊರತುಪಡಿಸಿ, ಸಚಿನ್ ತೆಂಡೂಲ್ಕರ್ ಭಾರತಕ್ಕೆ ಆರು ವಿಶ್ವಕಪ್‌ಗಳನ್ನು ಆಡಿದ ಏಕೈಕ ಕ್ರಿಕೆಟಿಗರಾಗಿದ್ದಾರೆ. ಸಚಿನ್ 1992 ರಿಂದ 2011 ರವರೆಗೆ ಆರು ವಿಶ್ವಕಪ್‌ಗಳನ್ನು ಭಾರತಕ್ಕಾಗಿ ಆಡಿದರು ಮತ್ತು ಅವರ ಕೊನೆಯ ವಿಶ್ವಕಪ್ ನಲ್ಲಿ ಕಪ್ ತಮ್ಮದಾಗಿಸಿಕೊಂಡಿದ್ದರು. 38 ವರ್ಷದ ಮಿಥಾಲಿ ರಾಜ್ ಅವರನ್ನು ಮಹಿಳಾ ಕ್ರಿಕೆಟ್‌ನ ಸಚಿನ್ ಎಂದು ಕರೆಯಲಾಗುತ್ತದೆ.
ಟ್ವೀಟ್ ಜೊತೆ ಭಾವನಾತ್ಮಕ ಪತ್ರ ಹಂಚಿಕೊಂಡ ಮಿಥಾಲಿ
ನಿವೃತ್ತಿಯ ನಂತರ ಮಿಥಾಲಿ ರಾಜ್ ಪತ್ರವೊಂದನ್ನು ಟ್ವೀಟ್ ಮೂಲಕ ಶೇರ್ ಮಾಡಿದ್ದಾರೆ. “ನಾನು ಚಿಕ್ಕ ಹುಡುಗಿಯಾಗಿ ಭಾರತೀಯ ನೀಲಿ ಜೆರ್ಸಿಯನ್ನು ಧರಿಸಲು ಪ್ರಾರಂಭಿಸಿದೆ. ಇದು ನನ್ನ ದೇಶವನ್ನು ಪ್ರತಿನಿಧಿಸುವ ದೊಡ್ಡ ಗೌರವವಾಗಿದೆ. ಈ ಪ್ರಯಾಣದಲ್ಲಿ ನಾನು ಒಳ್ಳೆಯದು ಮತ್ತು ಕೆಟ್ಟದ್ದನ್ನು ನೋಡಿದೆ. ಪ್ರತಿಯೊಂದು ಘಟನೆಯೂ ನನಗೆ ಹೊಸದನ್ನು ಕಲಿಸಿದೆ. ಈ 23 ವರ್ಷಗಳು ನನಗೆ ಅತ್ಯಂತ ಸವಾಲಿನ, ಆನಂದದಾಯಕ ಮತ್ತು ತೃಪ್ತಿಕರವಾಗಿವೆ. ಎಲ್ಲ ಪಯಣಗಳಂತೆ ಇದೂ ಕೂಡ ಕೊನೆಯಾಗಬೇಕಿತ್ತು. ನಾನು ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಂದ ನಿವೃತ್ತಿಯಾಗುತ್ತಿದ್ದೇನೆ.
ಇನ್ನು ಮೈದಾನಕ್ಕೆ ಕಾಲಿಟ್ಟಾಗಲೆಲ್ಲ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ಭಾರತವನ್ನು ಗೆಲ್ಲಲಿಸುವುದೇ ನನ್ನ ಉದ್ದೇಶವಾಗಿತ್ತು. ತ್ರಿವರ್ಣ ಧ್ವಜವನ್ನು ಪ್ರತಿನಿಧಿಸಲು ನನಗೆ ಸಿಗುವ ಪ್ರತಿಯೊಂದು ಅವಕಾಶವನ್ನು ನಾನು ಗೌರವಿಸುತ್ತೇನೆ. ನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಭಾರತ ತಂಡ ಅರ್ಹ ಮತ್ತು ಪ್ರತಿಭಾವಂತ ಯುವ ಆಟಗಾರರ ಕೈಯಲ್ಲಿದೆ. ಭಾರತೀಯ ಕ್ರಿಕೆಟ್ ಭವಿಷ್ಯ ಬಂಗಾರವಾಗಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಮತ್ತು ನಾಯಕಿಯಾಗಿ ನನಗೆ ದೊರೆತ ಬೆಂಬಲಕ್ಕಾಗಿ ನಾನು ಬಿಸಿಸಿಐ ಮತ್ತು ಶ್ರೀ ಜಯ್ ಶಾ ಸರ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.
ಇಷ್ಟು ವರ್ಷಗಳ ಕಾಲ ಭಾರತ ತಂಡದ ನಾಯಕತ್ವ ವಹಿಸಿರುವುದು ನನಗೆ ಗೌರವವಾಗಿದೆ. ಇದು ನನ್ನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಿದೆ. ಈ ಅವಧಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ಕೂಡ ಉತ್ತಮ ಆಕಾರವನ್ನು ಪಡೆದುಕೊಂಡಿದೆ ಎಂದು ನಾನು ಭಾವಿಸುತ್ತೇನೆ. ಈ ಪ್ರಯಾಣವು ಇಲ್ಲಿಗೆ ಕೊನೆಗೊಳ್ಳುತ್ತದೆ ಆದರೆ ಹೊಸದು ಪ್ರಾರಂಭವಾಗುತ್ತದೆ. ನಾನು ಈ ಆಟದಲ್ಲಿ ಉಳಿಯಲು ಬಯಸುತ್ತೇನೆ. ನಾನು ಈ ಆಟವನ್ನು ಇಷ್ಟಪಡುತ್ತೇನೆ. ಭಾರತ ಮತ್ತು ಪ್ರಪಂಚದಾದ್ಯಂತ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಕೊಡುಗೆ ನೀಡಲು ನಾನು ಸಂತೋಷಪಡುತ್ತೇನೆ. ನನ್ನ ಎಲ್ಲಾ ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು.’ ಎಂದು ಪತ್ರ ಬರೆದಿದ್ದಾರೆ.