Dinesh Karthik : 37 ನೇ ವಯಸ್ಸಿನಲ್ಲಿ ಡಿಕೆ ದರ್ಬಾರ್..!!
ಸ್ವೀಟ್ ಸಿಕ್ಸಿಟಿನ್ ಇಯರ್ಸ್ ಕ್ರಿಕೆಟ್ ಕೆರಿಯರ್.. 2006ರಲ್ಲಿ ಟೀಂ ಇಂಡಿಯಾದ ಪರ ಆಡಿದ ಮೊದಲ ಟಿ 20 ಪಂದ್ಯದಿಂದ ಹಿಡಿದು ಇಲ್ಲಿಯವರೆಗೂ ತಮ್ಮ ಬ್ಯಾಟಿಂಗ್ ನಲ್ಲಿ ಬದಲಾವಣೆ ಆಗಿಲ್ಲ ಅಂತಾ ದಿನೇಶ್ ಕಾರ್ತಿಕ್ ನಿರೂಪಿಸಿದ್ದಾರೆ. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿನ ಫಾರ್ಮ್ ಅನ್ನು ಅಂತರಾಷ್ಟ್ರೀಯ ಮ್ಯಾಚ್ ಗಳಲ್ಲಿ ಮುಂದುವರಿಸುತ್ತಾರಾ ಎಂಬ ಸಂದೇಹಗಳಿಗೆ ಉತ್ತರದಂತೆ ದಿನೇಶ್ ಕಾರ್ತಿಕ್ ಬ್ಯಾಟ್ ಬೀಸುತ್ತಿದ್ದಾರೆ. ಅದ್ಭುತ ಪ್ರದರ್ಶನದ ಮೂಲಕ 37 ರ ವಯಸ್ಸಿನಲ್ಲೂ ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಆಯ್ಕೆಗಾರರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನಕ್ಕಾಗಿ ಸವಾಲುಗಳನ್ನು ಎಸೆಯುತ್ತಿದ್ದಾರೆ. ಅಲ್ಲದೇ ದಿನೇಶ್ ಕಾರ್ತಿಕ್ ಬಗ್ಗೆ ಟೀಕೆ ಮಾಡಿದ್ದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
16 ವರ್ಷಗಳ ಕ್ರಿಕೆಟ್ ಜರ್ನಿಯಲ್ಲಿ ದಿನೇಶ್ ಕಾರ್ತಿಕ್, ದಕ್ಷಿಣ ಆಫ್ರಿಕಾ ಜೊತೆ ಜರುಗಿದ ನಾಲ್ಕನೇ ಟಿ 20 ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ. 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ದಿನೇಶ್ ಕಾರ್ತಿಕ್ ಇನ್ನಿಂಗ್ಸ್ ನಲ್ಲಿ ಒಂಭತ್ತು ಬೌಂಡರಿ, ಎರಡು ಸಿಕ್ಸರ್ ಗಳಿವೆ. ಈ ಅರ್ಧಶತಕದೊಂದಿಗೆ ದಿನೇಶ್ ಕಾರ್ತಿಕ್ ಒಂದು ಅಪರೂಪದ ದಾಖಲೆ ಬರೆದಿದ್ದಾರೆ. ಅಲ್ಲದೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಟೀಂ ಇಂಡಿಯಾ ಪರ ಅತ್ಯಂತ ಹಿರಿಯ ವಯಸ್ಸಿನಲ್ಲಿ ಟಿ 20 ಕ್ರಿಕೆಟ್ ಮಾದರಿಯಲ್ಲಿ ಅರ್ಧ ಶತಕ ದಾಖಲಿಸಿದ ಆಟಗಾರರಾಗಿ ದಾಖಲೆ ಬರೆದಿದ್ದಾರೆ. ದಿನೇಶ್ ಕಾರ್ತಿಕ್ ಗೆ ಪ್ರಸ್ತುತ 37 ವರ್ಷ 16 ದಿನ.

ಈ ಹಿಂದೆ 36 ವರ್ಷ 229 ದಿನಗಳ ವಯಸ್ಸಿನಲ್ಲಿ ಮಹೇಂದ್ರ ಸಿಂಗ್ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ದದಲ್ಲಿ ತಮ್ಮ ಕೆರಿಯರ್ ನ ಎರಡನೇ ಅರ್ಧಶತಕ ಸಿಡಿಸಿದ್ದರು. ಇನ್ನು ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ 35ರ ಹರಯದಲ್ಲಿ ಟಿ 20 ಕ್ರಿಕೆಟ್ ನಲ್ಲಿ ಅರ್ಧಶತಕ ಸಿಡಿಸಿದ್ದರು.
ಅಂದಹಾಗೆ ದಿನೇಶ್ ಕಾರ್ತಿಕ್ ತಮ್ಮ ಈ ಇನ್ನಿಂಗ್ಸ್ ಮೂಲಕ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಗೆ ತಿರುಗೇಟು ನೀಡಿದ್ದಾರೆ. ದಿನೇಶ್ ಕಾರ್ತಿಕ್ ಬಗ್ಗೆ ಈ ಹಿಂದೆ ಗಂಭೀರ್ “ಕಾರ್ತಿಕ್ ಇನ್ನಿಂಗ್ಸ್ ನ ಕೊನೆಯಲ್ಲಿ ಬ್ಯಾಟಿಂಗ್ ಗೆ ಬಂದು ಎರಡು ಮೂರು ಓವರ್ ಗಳಲ್ಲಿ ಮಾತ್ರ ಆಡುತ್ತೇನೆ ಅಂದ್ರೆ ಆಗುವುದಿಲ್ಲ. ಟೀಂ ಇಂಡಿಯಾ ದಿನೇಶ್ ಕಾರ್ತಿಕ್ ರಂತಹ ಮ್ಯಾಚ್ ಫಿನಿಷರ್ ಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಆದ್ರೆ ಆ ಜವಾಬ್ದಾರಿಯನ್ನು ಒಬ್ಬ ಆಲ್ ರೌಂಡರ್ ವಹಿಸಿಕೊಂಡರೇ ಚೆನ್ನಾಗಿರುತ್ತದೆ. ಅಲ್ಲದೇ ದಿನೇಶ್ ಕಾರ್ತಿಕ್ ಕೇವಲ ಎರಡು ಮೂರು ಓವರ್ ಗಳಲ್ಲಿ ಆಡುವುದಕ್ಕೆ ಸೀಮಿತವಾದರೇ ಅವರನ್ನ ವಿಶ್ವಕಪ್ ಗೆ ಆಯ್ಕೆ ಮಾಡುವುದು ಸೂಕ್ತವಲ್ಲ ಎಂದು ಗಂಭೀರ್ ವಾದಿಸಿದ್ದರು.
ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ 20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಲಾಂಗ್ ಇನ್ನಿಂಗ್ಸ್ ಆಡುವ ಮೂಲಕ ಗಂಭೀರ್ ಗೆ ತಿರುಗೇಟು ನೀಡಿದ್ದಾರೆ.








