ಬೆಂಗಳೂರು, ಮೇ 30 ; ನಿನ್ನೆ ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದಿದ್ದ ಸಚಿವ ರಮೇಶ್ ಜಾರಕಿಹೊಳಿ, ಇಂದು ಯಾವ ಯಾವ ಜಿಲ್ಲೆಯ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನ ಬಹಿರಂಗ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನಮಗೆ ಬಹುಮತವಿದೆ. ನಾವು ವಿಪಕ್ಷಗಳ ಶಾಸಕರ ರಾಜೀನಾಮೆ ಕೆಲಸಕ್ಕೆ ಕೈ ಹಾಕುವುದಿಲ್ಲ. ನಮ್ಮ ಜತೆ ಬರಲು ಸಾಕಷ್ಟು ಶಾಸಕರು ತಯಾರಿದ್ದಾರೆ. ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ ನೀಡಿದರೆ 20 ರಿಂದ 22 ಜನ ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ. ಸದ್ಯಕ್ಕೆ ಬಹುಮತವಿರುವುದರಿಂದ ಆ ಕೆಲಸಕ್ಕೆ ಕೈ ಹಾಕುವುದಿಲ್ಲ. ಬೆಳಗಾವಿ 3, ಬಿಜಾಪುರ 3, ಬೀದರ್ 2, ಕಲ್ಬುರ್ಗಿ 1, ರಾಯಚೂರು 2, ಕೊಪ್ಪಳದಲ್ಲಿ 1 ಬಳ್ಳಾರಿ 2, ದಾವಣಗೆರೆ 1, ಚಿತ್ರದುರ್ಗ 1, ಬೆಂಗಳೂರು ಸುತ್ತಮುತ್ತ 2 ಶಾಸಕರು ತಯಾರಿದ್ದಾರೆ ಎಂದು ಹೇಳಿದರು.
ಇನ್ನು ಯಡಿಯೂರಪ್ಪ ಜತೆ ನಾವು ಕೊನೆಯವರೆಗೂ ನಿಲ್ಲುತ್ತೇವೆ ಎಂದು ತಿಳಿಸಿದ ಅವರು, ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಮತೀಯ ಸಭೆ ನಡೆದಿಲ್ಲ. ಊಟಕ್ಕಾಗಿ ಶಾಸಕರು ಸೇರಿದ್ದಾರೆ. ಉಮೇಶ್ ಕತ್ತಿ ಸಚಿವ ಸ್ಥಾನ ಕೇಳೋದು ಅವರ ಸಹೋದರನಿಗೆ ರಾಜ್ಯಸಭೆ ಸ್ಥಾನ ಕೇಳೋದು ತಪ್ಪಲ್ಲ. ಎಲ್ಲರೂ ಕುಳಿತು ಅಂತಿಮ ನಿರ್ಧಾರ ಮಾಡ್ತೇವೆ. ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ನಾಯಕರು. ಅವರು ಹಾಗೂ ಅಮಿತ್ ಶಾ ಅವರನ್ನು ನಂಬಿ ಬಂದಿದ್ದೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.








