D K Shivakumar | ನಾನೊಬ್ಬ ಹಿಂದೂ, ಎಲ್ಲ ಧರ್ಮಕ್ಕೂ ಗೌರವ ಕೊಡಬೇಕು
ಬೆಂಗಳೂರು : ನಾನೊಬ್ಬ ಹಿಂದೂ, ಎಲ್ಲ ಧರ್ಮಕ್ಕೂ ಗೌರವ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜೂ.15ರಂದು ರಾತ್ರಿ 9ಗಂಟೆಗೆ ಕ್ಲಬ್‌ಹೌಸ್‌ನಲ್ಲಿ ‘ಸಂಡೇ ಅಂಕಲ್ಸ್ ಆರ್ ಮಂಡೇ ನರ್ಸ್’ಎಂಬ ಕಾರ್ಯಕ್ರಮವನ್ನು ತಂಡವೊಂದು ನಡೆಸಿತ್ತು. ಅದರಲ್ಲಿ ಶೈಲಜಾ ಅಮರನಾಥ್ ಸಹಿತ ಮುಂತಾದವರು ಭಾಗವಹಿಸಿದ್ದರು.
ಈ ವೇಳೆ ಹಿಂದೂ ದೇವರು ದೇವತೆಗಳಿಗೆ ಅವಮಾನ ಮಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ರಾಜ್ಯ ಬಿಜೆಪಿ ಘಟಕ ಆಕ್ರೋಶ ಹೊರಹಾಕಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಡಿಕೆಶಿ ಅವರೇ, ನೀವು ಕೂಡಾ ಸಿದ್ದರಾಮಯ್ಯ ಜಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದೀರಾ?ಹಿಂದೂ ದೇವ- ದೇವತೆ, ರಾಮಾಯಣಕ್ಕೆ ಅಪಮಾನ ಮಾಡಿದ ಶೈಲಜಾ ಅಮರನಾಥ್‌ಗೆ ಆಶ್ರಯ ನೀಡುವ ಮೂಲಕ ನಿಮ್ಮ ಅಂತರಾಳದಲ್ಲಿ ಇರುವ ಹಿಂದು ವಿರೋಧಿ ನೀತಿಯನ್ನು ಈಗ ಬಹಿರಂಗಪಡಿಸಿದ್ದೀರಿ.ಸಿದ್ದರಾಮಯ್ಯ ಒಬ್ಬ ಹಿಂದು ವಿರೋಧಿ. ನೀವೂ ಅವರಂತೆಯೇ ಎಂದು ಪ್ರಶ್ನಿಸಿದೆ.

ಸೀತಾ ಮಾತೆಗೆ ಅಪಮಾನ ಮಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಪಾದ ಸೇವೆ ಮಾಡುವುದಕ್ಕೆ ನಿಮಗೆ ಎಲ್ಲಿಲ್ಲದ ಖುಷಿ.ಅದೇ ರೀತಿ ರಾಮಾಯಣಕ್ಕೆ ಅಪಮಾನ ಮಾಡಿದ ಶೈಲಜಾ ಅಮರನಾಥ್ ರಕ್ಷಣೆ ಮಾಡುವುದು ನಿಮ್ಮ ಆದ್ಯತೆಯೇ?ಹಿಂದುಗಳ ಭಾವನೆಗೆ ಧಕ್ಕೆ ತಂದ ನೀವು ಮೊದಲು ರಾಜೀನಾಮೆ ನೀಡಬೇಕು
ಕರಾವಳಿ ಭಾಗದಲ್ಲಿ ಕೋಮು-ಸೌಹಾರ್ದತೆ ಕದಡುವುದಕ್ಕೆ ಡಿಕೆಶಿ ಅವರ ದಂಡು ಸಂಚು ರೂಪಿಸುತ್ತಿದೆ. ನಿಮ್ಮ ಆಶಾಡಭೂತಿತನ ಇನ್ನು ನಡೆಯದು.#ಹಿಂದೂವಿರೋಧಿಡಿಕೆಶಿ ಅವರೇ ಮೊದಲು ರಾಜೀನಾಮೆ ನೀಡಿ ಎಂದು ಆಗ್ರಹಿಸಿದೆ.
ಇದಕ್ಕೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನನ್ನ ಕ್ಷೇತ್ರದಲ್ಲಿ 300-400 ದೇವಸ್ಥಾನಗಳನ್ನ ಜೀರ್ಣೋದ್ಧಾರ ಮಾಡಿಸಿದ್ದೇನೆ.
ಬೇಕಾದ್ರೆ ಬಂದು ನೋಡಲಿ. ನಾನೊಬ್ಬ ಹಿಂದೂ, ಎಲ್ಲ ಧರ್ಮಕ್ಕೂ ಗೌರವ ಕೊಡಬೇಕು. ನಾವು ಯಾರಿಗೆ ಬೇಕಾದರೂ ಅಧಿಕಾರ ಕೊಡ್ತೇವೆ ಇವರಿಗೆ ಏನಾಗಬೇಕು.
ಇವರ ಪಾರ್ಟಿಗೆ ಏನಾಗಬೇಕು, ಅವರಿಗೆ ನಮ್ಮ ಯುವಕರ ಬಗ್ಗೆ ಭಯವಿದೆ.ಸಂಘಟನೆಗಳ ಬಗ್ಗೆ ಭಯವಿದೆ ಎಂದು ತಿಳಿಸಿದರು.








