ತೆಲುಗು ಚಿತ್ರರಂಗದಲ್ಲಿ ಮೆಗಾ ಫ್ಯಾಮಿಲಿ ಹಾಗೂ ನಂದಮೂರಿ ಫ್ಯಾಮಿಲಿ ನಡುವೆ ವಾರ್ ನಡೆಯುತ್ತಲೇ ಇರುತ್ತದೆ. ಈ ಹಿಂದೆ ಚಿರಂಜೀವಿ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದ ಬಾಲಯ್ಯ ಇದೀಗ ಮತ್ತೆ ಗುಡುಗಿದ್ದಾರೆ. ಇದಕ್ಕೆ ಕಾರಣ ತೆಲುಗು ಚಿತ್ರರಂಗವು ತನ್ನನ್ನು ನಿರ್ಲಕ್ಷಿಸಿ ಚಿರಂಜೀವಿ ಅವರನ್ನು ನಾಯಕನನ್ನಾಗಿ ಪರಿಗಣಿಸಿದೆ ಎಂಬುದೇ ಆಗಿದೆ.
ಬಾಲಯ್ಯ ಅಸಮಧಾನಕ್ಕೆ ಕಾರಣವೇನು?
ತೆಲಂಗಾಣ ಸಿನಿಮಾಟೋಗ್ರಫಿ ಸಚಿವರು ಸೇರಿದಂತೆ ತೆಲುಗು ಸಿನಿರಂಗದ ಪ್ರಮುಖರು ಇತ್ತೀಚೆಗೆ ಚಿರಂಜೀವಿ ನಿವಾಸದಲ್ಲಿ ಸಭೆ ಸೇರಿದ್ದರು. ಈ ವೇಳೆ ಕೊರೊನಾದಿಂದ ಜರ್ಜರಿತವಾಗಿರುವ ತೆಲುಗು ಚಿತ್ರರಂಗದ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದರು. ಇದರಲ್ಲಿ ಬಾಲಕೃಷ್ಣ ಭಾಗವಹಿಸಿರಲಿಲ್ಲ. ಈ ಸಭೆಯೇ ಬಾಲಕೃಷ್ಣ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಎನ್ ಟಿಆರ್ ಜಯಂತಿಯಲ್ಲಿ ಮಾತನಾಡಿದ ಅವರು, ‘ಸಿನಿಮಾ ಉದ್ಯಮದ ಪ್ರಮುಖರು ಸಭೆ ನಡೆಸಿದ್ದಾಗಿ ನಂತರ ಅವರೆಲ್ಲರೂ ತೆಲಂಗಾಣ ಹಾಗೂ ಆಂಧ್ರ ಸಿಎಂ ಅವರನ್ನು ಭೇಟಿ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ನನ್ನನ್ನು ಯಾರೂ ಕರೆದಿಲ್ಲ’. ಸರ್ಕಾರಗಳೊಂದಿಗೆ ತೆಲುಗು ಸಿನಿಪ್ರಮುಖರು ಚರ್ಚಿಸುತ್ತಿರುವ ವಿಷಯದ ಬಗ್ಗೆ ನನಗೆ ಯಾರೂ ವೈಯಕ್ತಿಕವಾಗಿ ತಿಳಿಸಿಲ್ಲ, ಬದಲಿಗೆ ಟಿವಿಗಳಲ್ಲಿ ಬರುತ್ತಿರುವುದನ್ನು ನೋಡಿದೆ. ಮಾತುಕತೆ ಫಲಪ್ರದವಾದಲ್ಲಿ ಜೂನ್ ಎರಡನೇ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದ ಬಾಲಕೃಷ್ಣ, ಚಿತ್ರರಂಗಕ್ಕೆ ಸರ್ಕಾರವು ವಿಶೇಷ ಅನುದಾನ ನೀಡಬೇಕು ಎಂದು ಸಹ ಒತ್ತಾಯಿಸಿದ್ದಾರೆ.
ಇನ್ನು ಬಾಲಯ್ಯ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೇ ಎನ್‌ಟಿಆರ್ ಕುಟುಂಬ ಅಭಿಮಾನಿಗಳು ಮತ್ತು ಬಾಲಕೃಷ್ಣ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಚಿರಂಜೀವಿ ಅವರನ್ನೇ ಇದಕ್ಕೆ ಕಾರಣ ಎಂದು ಕಿಡಿಕಾರುತ್ತಿದ್ದಾರೆ.
ಅಲ್ಲದೇ ಈ ವಿಚಾರವಾಗಿ ಇಬ್ಬರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಯುದ್ಧವೇ ನಡೆಯುತ್ತಿದೆ.








